ಕಾಸರಗೋಡು: ಎಂಡಿಎಂಎ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಉಪ್ಪಳ ಮಣಿಮುಂಡ ಬದರ್ ಮಂಜಿಲ್‌ನ ಶಮೀರ್ (41) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಉಪ್ಪಳ ಪೇಟೆಯಲ್ಲಿ 2021 ಆಗಸ್ಟ್‌ನಲ್ಲಿ ಅಂದು ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಎ. ಬಾಲಚಂದ್ರನ್ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 11 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆರೋಪಿ ಶಮೀರ್‌ನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಅಂದು ಮಂಜೇಶ್ವರ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಎ. ಸಂತೋಷ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.






