ಪ್ರಿಯತಮೆ ಉಪೇಕ್ಷಿಸಿದ ದುಃಖ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆತ: ಯುವಕ ಸೆರೆ

ಕೊಚ್ಚಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆತ ನಡೆಸಿದ 18ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 7ರಂದು ರಾತ್ರಿ ಈತ ಕಲ್ಲೆಸೆದಿದ್ದನು. ಘಟನೆಯ ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಎರಡು ವಾರಗಳ ಬಳಿಕ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ವಿರುದ್ಧ ಕಲ್ಲೆಸೆತ ಉಂಟಾಯಿತು. ಆಲುವಾ ಹಾಗೂ ಅಂಗಮಾಲಿ ಮಧ್ಯೆ ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ಸಮೀಪ ಕಲ್ಲೆಸೆತವುಂಟಾಗಿತ್ತು. ಇದರಿಂದ ರೈಲಿನ ಸಿ೯ ಕೋಚ್‌ನ ಕಿಟಕಿಯ ಲ್ಯಾಮಿನೇಟೆಡ್ ಗಾಜಿಗೆ ಹಾನಿ ಉಂಟಾಗಿತ್ತು. ಘಟನೆಯ ಸಿಸಿ ಟಿವಿ ದೃಶ್ಯಗಳು ವಂದೇ ಭಾರತ್ ಕೋಚ್‌ನ ಹೊರಗಿರುವ ಕ್ಯಾಮರಾದಲ್ಲಿ ದಾಖಲಾಗಿದೆಯಾದರೂ ಕಲ್ಲೆಸೆಯುವ ವ್ಯಕ್ತಿಯ ಮುಖ ಸ್ಪಷ್ಟವಾಗಿರಲಿಲ್ಲ.

ಬಳಿಕ ಹಳಿಯ ಹತ್ತಿರ ಬರುವ ವ್ಯಕ್ತಿಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಮೂರು ಬಾರಿ ರೈಲಿಗೆ ಈತ ಕಲ್ಲೆಸೆತ ನಡೆಸಿದ್ದನಾದರೂ ಒಮ್ಮೆ ಮಾತ್ರವೇ ರೈಲಿಗೆ ಬಡಿದಿದೆ. ಪ್ರೇಮ ನಿರಾಸೆಯೇ ರೈಲಿಗೆ ಕಲ್ಲೆಸೆಯಲು ಪ್ರೇರಣೆ ಎಂದು ಹೇಳಲಾಗುತ್ತಿದ್ದು, ಪ್ರಿಯತಮೆ ಈತನನ್ನು ಉಪೇಕ್ಷಿಸಿ ತೆರಳಿದ ದುಃಖದಲ್ಲಿ ಹಳಿಯ ಸಮೀಪ ಕುಳಿತಿರುವಾಗ ರೈಲು ಬರುವುದನ್ನು ಕಂಡಿದ್ದು, ಸುಮ್ಮನೆ ಕಲ್ಲೆಸೆದಿರುವುದಾಗಿಯೂ ಈತ ತಿಳಿಸಿದ್ದಾನೆ.

RELATED NEWS

You cannot copy contents of this page