ಕಾರು -ಬೈಕ್ ಢಿಕ್ಕಿ: ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ಮೇಲ್ಸೇತುವೆಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟನು.

ವಿದ್ಯಾನಗರ ಉದಯಗಿರಿ ನಿವಾಸಿ ಬಿ. ದಿನೇಶ-ರತ್ನಾವತಿ ದಂಪತಿಯ ಏಕ ಪುತ್ರ, ಪೆರಿಯ ಸರಕಾರಿ ಪಾಲಿಟೆಕ್ನಿಕ್‌ನ ತೃತೀಯ ವರ್ಷ ಕಂಪ್ಯೂಟರ್ ವಿದ್ಯಾರ್ಥಿ ರಕ್ಷಿತ್ ಎನ್ (19) ಸಾವನ್ನಪ್ಪಿದ ದುರ್ದೈವಿ. ಕಳೆದ ಗುರುವಾರ ಸಂಜೆ  ಅಪಘಾತ ಸಂಭವಿಸಿದೆ.  ಸಹಪಾಠಿ ಕಾಸರಗೋಡು ಕೊಲ್ಲಂಪಾಡಿ ಬೈತುಲ್ ಸಯ್ಯಿದ್ ಹೌಸ್‌ನ ಕೆ.ಎ. ಸೈದ್ (19) ಬೈಕ್  ಚಲಾಯಿಸುತ್ತಿದ್ದನು.  ರಕ್ಷಿತ್  ಬೈಕ್‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದನು. ಅಪಘಾತದಲ್ಲಿ ಈತ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.

ರಕ್ಷಿತ್ ಮತ್ತು ಸೈದ್ ಬೈಕ್‌ನಲ್ಲಿ ಕಾಲೇಜಿನಿಂದ ಮನೆಗೆ ಹಿಂತಿರು ಗುತ್ತಿದ್ದ ದಾರಿ ಮಧ್ಯೆ ಚಟ್ಟಂಚಾಲ್ ಮೇಲ್ಸೇತುವೆಯಲ್ಲಿ ಹಿಂದಿನಿಂದ ಬಂದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿತ್ತು.  ಢಿಕ್ಕಿಯ ಆಘಾತಕ್ಕೆ ರಕ್ಷಿತ್ ಮೇಲ್ಸೇತುವೆಯಿಂದ ಆರು ಮೀಟರ್‌ನಷ್ಟು ಕೆಳಗಿರುವ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರ  ಗಾಯಗೊಂಡಿದ್ದನು. ಆತನನ್ನು ತಕ್ಷಣ ಕಾಸರಗೋಡಿನ ಆಸ್ಪತ್ರೆಗೆ ನಂತರ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಅಪಘಾತಕ್ಕೆ  ಸಂಬಂಧಿಸಿ ಢಿಕ್ಕಿ ಹೊಡೆದ ಕಾರು ಚಲಾಯಿಸಿದ ಎಂ. ಮುಹಮ್ಮದ್ ಶಿಬಿಲ್‌ನ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.

You cannot copy contents of this page