ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಸೂತ್ರಧಾರ ಸೇರಿ 22 ಮಂದಿ ಸೆರೆ

ನವದೆಹಲಿ: ಭಾರತದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಪರ ಬೇಹುಗಾರಿಕೆ ನಡೆಸುತ್ತಿದ್ದ ಜಾಲದ ಸೂತ್ರಧಾರ ಸೇರಿದಂತೆ 22 ಮಂದಿಯನ್ನು  ಉತ್ತರಪ್ರದೇಶದ ಘಾಸಿಯಾಬಾದ್ ನಿಂದ ಪೊಲೀಸರು ಬಂಧಿಸಿದ್ದಾರೆ.

 ಇದರ ಹೊರತಾಗಿ ಇತರ ೮ ಮಂದಿ ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಬೇಹುಗಾರಿಕೆ ತಂಡದ ಪ್ರಧಾನ ಸೂತ್ರ ಧಾರನಲ್ಲೋರ್ವನಾಗಿರುವ ನೌಶಾದ್ ಅಲಿ (ಲಾಲು) ಎಂಬಾತನನ್ನು ಫರೀದಾಬಾದ್‌ನಿಂದ ಬಂಧಿಸಲಾಗಿದೆ. ಈತ ಫರೀದಾಬಾದ್‌ನ ಪೆಟ್ರೋಲ್ ಬಂಕ್ ಸಮೀಪ ಚಕ್ರಗಳಿಗೆ ಪಂಕ್ಚರ್ ಲಗತ್ತಿಸುವ ಅಂಗಡಿಯಲ್ಲಿ ಕಾರ್ಮಿಕನ ಸೋಗಿನಲ್ಲಿ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಅತೀ ನಿಪುಣನಾಗಿರುವ ನೌಶಾದ್ ಅಲಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಆ ಜಾಲದಲ್ಲಿ ಒಳಗೊಂಡಿರುವ ಇತರ ಕೊಂಡಿಗಳನ್ನು ಪತ್ತೆಹಚ್ಚಿ ಅವರನ್ನು ಸೆರೆಹಿಡಿಯಲು ಪೊಲೀಸರಿಗೆ ಸಾಧ್ಯವಾಗಿದೆ. ಭಾರತೀಯ ಸೇನಾ ಕೇಂದ್ರಗಳು, ರೈಲ್ವೇ ನಿಲ್ದಾಣಗಳು ಹಾಗೂ ಅತೀವ ಸೂಕ್ಷ್ಮ ಸಂವೇದಿ ಕೇಂದ್ರಗಳ ಮೆಸೇಜ್ ಆಪ್‌ಗಳನ್ನೂ ಈತನಿಂದ ಪತ್ತೆಹಚ್ಚಲಾಗಿದೆ. ಈ ಮೆಸೇಜ್ ಆಪ್‌ಗಳ ಮೂಲಕ ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ಕಳುಹಿಸಿಕೊಡುವುದು ಈತನ ಪ್ರಧಾನ ದಂಧೆಯಾಗಿದೆ.  ಕಂಪ್ಯೂಟರ್ ಹಾಗೂ ತಂತ್ರಜ್ಞಾನದಲ್ಲಿ ನಿಪುಣ ರಾಗಿರುವ  ಯುವಕರಿಗೆ ಉದ್ಯೋಗ ಭರವಸೆ ನೀಡಿ ಅವರನ್ನು ತಮ್ಮತ್ತ ಆಕರ್ಷಿಸಿ ಅವರನ್ನೂ ಈ ಬೇಹುಗಾರಿಕಾ ಜಾಲದ ಸದಸ್ಯರನ್ನಾಗಿ ಒಳ ಪಡಿಸುವ ಯತ್ನವನ್ನೂ   ಇದರ ಸೂತ್ರಧಾರ ನೌಶಾದ್‌ಅಲಿ  ನಡೆಸುತ್ತಿದ್ದನೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.

 ದೇಶದಾದ್ಯಂತ ಹಲವು ಪ್ರಧಾನ ಕೇಂದ್ರಗಳಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸುವ  ಪ್ರಧಾನ ಯೋಜನೆಯನ್ನು ಈತ ಹಾಕಿಕೊಂಡಿದ್ದ ಎಂಬುವುದು ತನಿಖೆಯಲ್ಲಿ  ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page