ಜಿಮ್ನೇಶ್ಯಮ್ ಮರೆಯಲ್ಲಿ ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿ ಸೆರೆ

ತೃಶೂರು: ಜಿಮ್ನೇಶ್ಯಮ್ ಹಾಗೂ ಬ್ಯೂಟಿ ಸೆಲೂನ್‌ನ ಮರೆಯಲ್ಲಿ  ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ತೃಪ್ರಯಾರ್‌ನ ಜಿಮ್ನೇಶ್ಯಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೆರಿಂಙೋಟುಕರ ತಾನ್ಯಂ ನಿವಾಸಿ ಶ್ರೀಲಕ್ಷ್ಮಿ (30) ಸೆರೆಗೀಡಾದ ಯುವತಿ. ಈಕೆಯ ಕೈಯಿಂದ 2.270 ಕಿಲೋ ಗ್ರಾಂ ಹ್ಯಾಶಿಶ್ ಆಯಿಲ್, 90,500 ರೂ. ಹಾಗೂ ಹ್ಯಾಶಿಶ್ ಆಯಿಲ್ ಮಾರಾಟ ನಡೆಸಲು ಉಪಯೋಗಿತ್ತಿದ್ದ 50 ಖಾಲಿ ಪ್ಲಾಸ್ಟಿಕ್ ಬಾಟ್ಲಿ ಮೊದಲಾದವುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುಪ್ತ ಮಾಹಿತಿ ಲಭಿಸಿದ ಆಧಾರದಲ್ಲಿ ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದ ಡಾನ್ಸಾಪ್ ತಂಡ ಹಾಗೂ ಒಲಪ್ಪಾಡ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಯುವತಿಯನ್ನು ಸೆರೆ ಹಿಡಿಯಲಾಗಿದೆ. ಕರಾವಳಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಉಪಯೋಗಿಸುತ್ತಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಶಾಲೆ ಮಕ್ಕಳ ಮೇಲೆ ನಿಗಾ ಇರಿಸಿ ನಡೆಸಿದ ತನಿಖೆಯಲ್ಲಿ ಇದರ ಮೂಲ ಪತ್ತೆಹಚ್ಚಲಾಗಿದೆ. ಯುವತಿಗೆ ಮಾದಕ ವಸ್ತು ತಲುಪಿಸುವವರ ಕುರಿತು ಮಾಹಿತಿ ಲಭಿಸಿದ್ದು, ಅವರ ಪತ್ತೆಗಾಗಿ ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page