ಬಿಸಿಲ ಬೇಗೆಯನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳ ಬಿರುಸಿನ ಮತಯಾಚನೆ

ಕಾಸರಗೋಡು: ಬಿರು ಬೇಸಿಗೆಯ ಬಿಸಿಲ ತಾಪವನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳು ಓಡಾಟದಲ್ಲಿ ನಿರತರಾಗಿದ್ದಾರೆ. ಎಂಡೋಸಲ್ಫಾನ್ ದುರಂತ ಮಳೆ ಸುರಿದ ಬದಿಯಡ್ಕ ಪಂಚಾಯತ್‌ನಲ್ಲಿ ಕಾಸರಗೋಡು ಮಂಡಲ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಪ್ರಚಾರ ನಡೆಸಿದರು. ಕವಿ ಕಯ್ಯಾರ ಕಿಂಞಣ್ಣ ರೈಯವರ ಮನೆ, ಮಾನ್ಯ ಜೆಎಸ್‌ಬಿಎಸ್ ಶಾಲೆ, ಅಲ್ಲಿನ ಕೊರಗತನಿಯ ಸ್ಥಾನ ಸಹಿತ ಹಲವಾರು ಪ್ರಮುಖ ಕೇಂದ್ರಗಳನ್ನು ಅವರು ಸಂದರ್ಶಿಸಿ ಬದಿಯಡ್ಕ ಪೇಟೆಯ ಮಸೀದಿಯಲ್ಲಿ ಜುಮುಅ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಮಾಹಿನ್ ಕೇಳೋಟ್, ಅನಸ್ ಎದ್ರುತೋಡು, ಶ್ಯಾಮ್ ಪ್ರಸಾದ್ ಮಾನ್ಯ ಮೊದಲಾದವರು ಭಾಗವಹಿಸಿದರು. ಮಧ್ಯಾಹ್ನ ಬಳಿಕ ಮಧೂರು ಪಂಚಾಯತ್‌ನ ಗಣ್ಯರನ್ನು ಭೇಟಿಯಾಗಿ ಮತ ಯಾಚಿಸಿದರು. ಇಂದು ಕಾಸರಗೋಡು ನಗರಸಭೆ, ಮೊಗ್ರಾಲ್ ಪುತ್ತೂರು ಪಂಚಾಯತ್‌ನಲ್ಲಿ ಪರ್ಯಟನೆ ನಡೆಸುವರು.

ಶಾನವಾಸ್ ಪಾದೂರು ಮಾಲಿಕ್ ದೀನಾರ್ ಮಸೀದಿಯಿಂದ ನಿನ್ನೆ ಪರ್ಯಟನೆ ಆರಂಭಿಸಿದರು. ಬೆಳಿಗ್ಗೆ ವಿದ್ಯಾನಗರ, ಚಾಲ ಎಂಬೆಡೆಗಳಲ್ಲಿ ಮತದಾರರನ್ನು ಕಂಡ ಬಳಿಕ ಮಾಲಿಕ್ ದೀನಾರ್ ಮಸೀದಿಯಲ್ಲಿ ಶುಕ್ರವಾರದ ನಮಾಜು ನೆರವೇರಿಸಿದರು. ಬಳಿಕ ಕಾಸರಗೋಡು ನಗರದಲ್ಲಿ ಮತ ಯಾಚಿಸಿದರು. ಮುಖಂಡರಾದ ಟಿಎಂಎ ಕರೀಂ, ಸಿ. ಶಾಂತಕುಮಾರಿ, ಎಸ್. ಸುನಿಲ್, ಪಿ. ಜಾನಕಿ, ಅನಿಲ್ ಚೆನ್ನಿಕ್ಕರ ಮೊದಲಾದವರು ಜೊತೆಗಿದ್ದರು.

ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ಅಣಂಗೂರಿನಿಂದ ಪರ್ಯಟನೆ ಆರಂಭಿಸಿದರು. ಬಳಿಕ ಕೊರಕ್ಕೋಡು ಗುಡ್ಡೆ ವಾರ್ಡ್‌ಗಳಲ್ಲಿ ಮತಯಾಚಿಸಿದರು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾಮಂದಿರ ಪರಿಸರದಲ್ಲಿ ಗೋಡೆ ಬರಹ ಪ್ರಚಾರದಲ್ಲೂ ಭಾಗವಹಿಸಿದರು. ಬಳಿಕ ಮೊಗ್ರಾಲ್ ಪುತ್ತೂರು ಪಂಚಾಯತ್‌ನ 14,17,18 ಬೂತ್ ಒಳಗೊಳ್ಳುವ ಚುನಾವಣಾ ಕಚೇರಿಯ ಉದ್ಘಾಟನೆಯನ್ನು ನಿರ್ವಹಿಸಿದರು. ಬಳಿಕ ಮಹಿಳಾ ಸಂಗಮದಲ್ಲಿ ಭಾಗವಹಿಸಿದರು. ಅಪರಾಹ್ನ ಮಧೂರು ಪಂಚಾಯತ್ ವಿವಿಧ ಸ್ಥಳಗಳಲ್ಲಿ ಸಂದರ್ಶನ ನಡೆಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಮೀಳ ಮಜಲ್, ಸುಕುಮಾರ ಕುದ್ರೆಪ್ಪಾಡಿ, ಡಿ. ಶಂಕರ, ಸಂಪತ್ ಕುಮಾರ್, ಗಣೇಶ್ ಮೀಪುಗುರಿ ಮೊದಲಾದವರು ಭಾಗವಹಿಸಿದರು.

ಮಂಜೇಶ್ವರ ಪಂಚಾಯತ್‌ನ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್, ಮಂಗಳೂರು ಬಿಷಫ್ ಹೌಸ್‌ನಲ್ಲೂ, ಮಂಡಲದ ವಿವಿಧ ಭಾಗಗಳಲ್ಲೂ ನಿನ್ನೆ ಪರ್ಯಟನೆ ನಡೆಸಿದರು. ಮಂಗಳೂರು ಬಿಷಪ್ ಡಾ. ಪೀಟರ್ ಪೋಲ್ ಸಲ್ದಾನರನ್ನು ಭೇಟಿಯಾದ ಬಳಿಕ ಮಂಜೇಶ್ವರ, ವರ್ಕಾಡಿ, ಮೀಂಜ ಪಂಚಾಯತ್‌ಗಳಲ್ಲಿ ನಡೆದ ಐಕ್ಯರಂಗದ ಸಮಾವೇಶಗಳಲ್ಲಿ ಭಾವಗಹಿಸಿದರು. ಇವರ ಜೊತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದ ಪೈವಳಿಕೆ, ಪುತ್ತಿಗೆ, ಎಣ್ಮಕಜೆ ಪಂಚಾಯತ್‌ಗಳ ವಿವಿಧ ಸ್ಥಳಗಳಿಗೆ ನಿನ್ನೆ ಭೇಟಿ ನೀಡಿದರು. ಕನಿಲ ಭಗವತಿ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಪರ್ಯಟನೆ ಪೈವಳಿಕೆ, ಧರ್ಮತ್ತಡ್ಕ, ಸೀತಾಂಗೋಳಿ, ಪೆರ್ಲ ಎಂಬೆಡೆಗಳಲ್ಲಿ ಮುಂದುವರಿಯಿತು. ಅಂಗಡಿಗಳು ಹಾಗೂ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಈ ವೇಳೆ ಮುಖಂ ಡರಾದ ಶಿವಪ್ಪ ರೈ, ಜಯರಾಮ್ ಬಲ್ಲಂಗುಡೇಲು, ಮುಸ್ತಫ ಕಡಂಬಾರ್ ಸಹಿತ ಹಲವರು ಉಪಸ್ಥಿತರಿದ್ದರು.

ಇಂದು ಎಣ್ಮಕಜೆ ಪಂಚಾ ಯತ್‌ನ ಕಾಟುಕುಕ್ಕೆಯಲ್ಲಿ ಮೊದಲ ಹಂತದ ಪರ್ಯಟನೆಗೆ ಚಾಲನೆ ದೊರೆಯಲಿದ್ದು, ಕೇರಳ ಕಾಂಗ್ರೆಸ್ ಎಂ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿನೋಜ್ ಚಾಕೊ ಉದ್ಘಾಟಿಸುವರು. ಬಳಿಕ ಸ್ವರ್ಗ, ಶೆಟ್ಟಿ ಬಯಲು, ಅಡ್ಯನಡ್ಕ, ನಲ್ಕ ಸಹಿತ ವಿವಿಧೆಡೆಗಳಿಗೆ ಸಾಗಿ ರಾತ್ರಿ ೭ಕ್ಕೆ ಪಳ್ಳಂನಲ್ಲಿ ಕೊನೆಗೊಳ್ಳಲಿದೆ. ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ನಿನ್ನೆ ಕುಂಬಳೆಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು.

You cannot copy contents of this page