ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ತಲಪಾಡಿಯಲ್ಲಿ ಶನಿವಾರ ರಾತ್ರಿ ಸ್ಕೂಟರ್- ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಅತಿಥಿಗೃಹದ ನೌಕರ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ಪೊಡಿಪಳ್ಳಂ ನಿವಾಸಿ ಸತೀಶ್ ಕೆ. (46) ಮೃತಪಟ್ಟವರು. ಇವರು ಉಪ್ಪಳ ಬಳಿಯ ಮಣ್ಣಂಗುಳಿಯಲ್ಲಿರುವ ಪಿಡಬ್ಲ್ಯುಡಿ ಅತಿಥಿಗೃಹದಲ್ಲಿ ಕಳೆದ 7 ವರ್ಷಗಳಿಂದ ನೌಕರನಾಗಿದ್ದಾರೆ. ಶನಿವಾರ ರಾತ್ರಿ ಸ್ನೇಹಿತನ ಸ್ಕೂಟರ್‌ನಲ್ಲಿ ಸಹ ಸವಾರನಾಗಿದ್ದರು. ಗಂಭೀರ ಗಾಯಗೊಂಡ ಸತೀಶ್‌ರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಸ್ಕೂಟರ್ ಚಲಾಯಿಸಿದ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಚಂದ್ರ ಎಂಬವರು ಗಾಯಗೊಂಡಿದ್ದು, ಇವರು ಆಸ್ಪತ್ರೆಯಲ್ಲಿದ್ದಾರೆ. ಮೃತ ಸತೀಶ್ ತಾಯಿ, ಪತ್ನಿ ಆಶಾ, ಮಕ್ಕಳಾದ ಅನುಶ್ರೀ, ಧ್ವನಿಶ್ರೀ, ಸಹೋದರ, ಸಹೋದರಿ ಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಟ್ಟಿದ್ದಾರೆ.





