ಕಾಸರಗೋಡು: ಕರ್ನಾಟಕದ ಹಾಸನದಲ್ಲಿ ಜೀತದಾಳುಗಳ ರೀತಿಯಲ್ಲಿ ದುಡಿಸುತ್ತಿದ್ದ ಕಾಸರಗೋಡು ಪುತ್ತಿಗೆ ನಿವಾಸಿ ಸೇರಿದಂತೆ 18 ಮಂದಿಯನ್ನು ಕರ್ನಾಟಕ ಪೊಲೀಸರು ಹಾಗೂ ಕಂದಾಯ ಇಲಾಖೆಯವರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಘಟನೆ ನಡೆದಿದೆ.
ಪುತ್ತಿಗೆ ವಿಕಾಸ್ನಗರದ ನಿವಾಸಿ ಉದಯ (37) ಹಾಗೂ ಕೊಲ್ಲಂ ನಿವಾಸಿಗಳೂ ಸೇರಿದಂತೆ ಒಟ್ಟು 18 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಉದಯರನ್ನು ಕರ್ನಾಟಕದ ಸಂಬಂಧಪಟ್ಟ ಅಧಿಕಾರಿಗಳು ಕಾಸರಗೋಡಿಗೆ ಕರೆತಂದು ಅವರನ್ನು ಜಿಲ್ಲಾ ಹೆಚ್ಚುವರಿ ಮೆಜಿಸ್ಟ್ರೇಟ್ (ಎಡಿಎಂ) ಕೆ.ವಿ.ಶ್ರುತಿಯವರ ಸಾನಿಧ್ಯದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಹಾಸನ ಜಿಲ್ಲೆಯ ಚಾತ್ತನಹಳ್ಳಿ ಹಳೆಬೀಡು ಹುಬ್ಳಿಗೆ ಉದಯ ಸೇರಿದಂತೆ ಕರ್ನಾಟಕದ ಐದು ಮಂದಿ ಒಂದು ವರ್ಷದ ಹಿಂದೆ ಹೋಗಿದ್ದು ಬಳಿಕ ಅಲ್ಲಿನ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಇದರ ಮೊದಲು ಕೇರಳ, ಒಡಿಸ್ಸಾ, ಝಾರ್ಖಂಡ್, ಉತ್ತರಪ್ರದೇಶ, ಕರ್ನಾಟಕದ ಹಾವೇರಿ, ವಿಜಯಪುರ, ಗದಗ ಹಾಗೂ ಇತರ ಹಲವು ಜಿಲ್ಲೆಯವರು ಆ ತೋಟದಲ್ಲಿ ದುಡಿಯಲಾರಂಭಿಸಿದ್ದರು. ಇವರಿಗೆ ದಿನಕ್ಕೆ ತಲಾ 700 ರೂ. ವೇತನ ನೀಡುವ ಭರವಸೆ ನೀಡಲಾಗಿತ್ತು. ಹೀಗೆ ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಬೆಳಿಗ್ಗೆ ೬ರಿಂದ ರಾತ್ರಿ 8 ಗಂಟೆ ತನಕ ಜೀತದಾಳುಗಳಂತೆ ದುಡಿಯಬೇಕಾದ ವಿಷಯ ಅವರ ಗಮನಕ್ಕೆ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕೃಷಿ ತೋಟಕ್ಕೆ ಆಹಾರ ತಂದು ಕಾರ್ಮಿಕರಿಗೆ ವಿತರಿಸಲಾಗುತ್ತಿತ್ತು. ಅದರಲ್ಲಿ ಬಾಕಿ ಉಳಿದ ಆಹಾರವನ್ನು ರಾತ್ರಿ ವೇಳೆ ನೀಡಲಾಗುತ್ತಿತ್ತು. ಬೆಳಿಗ್ಗೆ ಸೇವಿಸಲು ಆಹಾರ ನೀಡುತ್ತಿರಲಿಲ್ಲ. ಇದು ಅಲ್ಲಿನ ಸ್ಥಿತಿಯಾಗಿದೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.
ಆ ತೋಟದ ಪಕ್ಕದಲ್ಲೇ ಶೆಡ್ವೊಂದನ್ನು ನಿರ್ಮಿಸಿ ಕಾರ್ಮಿಕರನ್ನು ರಾತ್ರಿ ವೇಳೆ ಅಲ್ಲಿ ಕೂಡಿಹಾಕಲಾಗುತ್ತಿತ್ತು. ಕೆಲಸ ಮಾಡುವ ವೇಳೆ ಅಲ್ಪ ಅತ್ತಿತ್ತ ಸರಿದರೆ ತೋಟದ ಮಾಲಕ ಬೆತ್ತದಿಂದ ಹೊಡೆಯುತ್ತಿದ್ದನ. ಇಂತಹ ಸಂಕಷ್ಟ ಜೀವನ ಸಹಿಸಲಾಗದೆ ಓರ್ವ ಕಾರ್ಮಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಊರಿಗೆ ತಲುಪಿದ್ದನು. ಆ ಬಗ್ಗೆ ಆತನ ತಾಯಿ ಪೊಲೀಸರಿಗೆ ದೂರು ನೀಡಿದಾಗಲಷ್ಟೇ ತೋಟದಲ್ಲಿ ಜೀತದಾಳುಗಳ ರೀತಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಕಷ್ಟಮಯ ಜೀವನದ ವಿಷಯ ಬಹಿರಂಗಗೊಂಡಿದೆ. ಆ ದೂರಿನ ಆಧಾರದಲ್ಲಿ ಕರ್ನಾಟಕ ಪೊಲೀಸರು ಮತ್ತು ಕಂದಾಯ ಇಲಾಖೆಯವರು ಸೇರಿ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ತೋಟದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ೧೮ ಮಂದಿ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಅವರನ್ನು ಊರಿಗೆ ಕಳುಹಿಸಲಾಯಿತು. ಈ ಪೈಕಿ ಉದಯನನ್ನು ಅಲ್ಲಿನ ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿಗಳನ್ನೊ ಳಗೊಂಡ ತಂಡ ಕಾಸರಗೋಡಿಗೆ ಕರೆತಂದು ಬಳಿಕ ಎಡಿಎಂರ ಸಾನಿಧ್ಯ ದಲ್ಲಿ ಮನೆಯವರಿಗೆ ಬಿಟ್ಟುಕೊಡಲಾಯಿತು.






