ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹಲ್ಲೆಗೈದು 12 ಪವನ್ ಚಿನ್ನಾಭರಣ ದರೋಡೆಗೈದ ಆರೋಪಿ ಬಂಧನ

ಕಾಸರಗೋಡು: ಮನೆ ಬಾಡಿಗೆಗೆ ಪಡೆಯಲೆಂಬ ನೆಪದಲ್ಲಿ ತಲುಪಿ ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ  ಹಲ್ಲೆಗೈದ ಬಳಿಕ 12 ಪವನ್ ಚಿನ್ನಾಭರಣ ಗಳನ್ನು ದರೋಡೆಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಕಾಞಂಗಾಡ್ ಮಾವುಂಗಾಲ್ ಆನಂದಾಶ್ರಮ ಬಳಿಯ ಏಚಿಕಾನ ನಿವಾಸಿ ಚಾಮ ಕುಟ್ಟಿ ಹೌಸ್‌ನ ರಾಜ್‌ಮೋಹನ್ (42) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಕಳೆದ ಸೋಮವಾರ ಮಧ್ಯಾಹ್ನ ೧ ಗಂಟೆ ವೇಳೆ ಆಲಪ್ಪುಳ ಬಳಿಯ ಕಣಿಯಾಂಕುಳಂ ಜಂಕ್ಷನ್ ಸಮೀಪದ ಮನೆಯಲ್ಲಿ ದರೋಡೆ ನಡೆದಿದೆ. ಕೈದವನ ಕಣಿಯಾಂ ಕುಳಂ ಅಪರ್ಣದಲ್ಲಿ ವಾಸಿಸುವ ಕಯರ್ ಫೆಡ್‌ನ ಮಾಜಿ ಪರ್ಚೆಸ್ ಮೆನೇಜರ್ ಕೆ.ಆರ್. ಸುದರ್ಶನ್ (70), ಪತ್ನಿ ರತ್ನಕುಮಾರಿ (೬೫) ಎಂಬಿವರಿಗೆ ಹಲ್ಲೆಗೈದು ಚಿನ್ನಾಭರಣ ದರೋಡೆ ನಡೆಸಲಾಗಿತ್ತು.

ರತ್ನಕುಮಾರಿ ಧರಿಸಿದ್ದ ಕರಿಮಣಿ ಸರ, ಕಪಾಟಿನಲ್ಲಿದ್ದ ಮಾಲೆ, 2 ಬಳೆಗಳು, 3 ಉಂಗುರ ಸಹಿತ 63.5 ಗ್ರಾಂ ಚಿನ್ನಾಭರಣ ಹಾಗೂ 5,೦೦೦ ರೂ.ವನ್ನು ಆರೋಪಿ ದರೋಡೆಗೈದಿದ್ದನು. ಘಟನೆ ವೇಳೆ ತಾನು ಧರಿಸಿದ್ದ ಅಂಗಿಯಲ್ಲಿ ಮೆಣಸಿನ ಹುಡಿ ಚೆಲ್ಲಿದುದರಿಂದ ಸುದರ್ಶನ್‌ರ ಅಂಗಿಯನ್ನು ಧರಿಸಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು. ದರೋಡೆ ನಡೆದು ಗಂಟೆಗಳೊಳಗೆ ಆರೋಪಿಯನ್ನು ಆಲಪ್ಪುಳ ಸೌತ್ ಪೊಲೀಸರು ಕಸ್ಟಡಿಗೆ ತೆಗೆದಿದ್ದರು.  ಈತನ ಕೈಯಿಂದ ಚಿನ್ನಾಭರಣ ಹಾಗೂ ಹಣ ಪತ್ತೆಹಚ್ಚಲಾಗಿದೆ. ಆರೋಪಿ ವಿರುದ್ಧ ಇತರ ಪ್ರಕರಣಗಳೂ ಇವೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ. ಎರ್ನಾಕುಳಂ ನೋರ್ತ್ ಪೊಲೀಸರು ದಾಖಲಿಸಿಕೊಂಡ  ಪ್ರಕರಣದಲ್ಲಿ ರಿಮಾಂಡ್ ಕಾಲಾವಧಿ ಮುಗಿದು ಎರಡು ವಾರಗಳ ಹಿಂದೆಯಷ್ಟೇ ಆರೋಪಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.

You cannot copy contents of this page