ಉಷ್ಣತೆ ಹೆಚ್ಚಿದಂತೆ ತೀವ್ರಗೊಂಡ ಹಾವುಗಳ ಹಾವಳಿ: 2 ದಿನಗಳಲ್ಲಾಗಿ ರಾಜ್ಯದಲ್ಲಿ ಬಾಲಕ ಸಹಿತ ಇಬ್ಬರು ಮೃತ್ಯು: ಓರ್ವನ ಸ್ಥಿತಿ ಗಂಭೀರ

ತಿರುವನಂತಪುರ: ರಾಜ್ಯ ವಿವಿಧೆಡೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಹಾವುಗಳ ಕಡಿತದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೊನ್ನೆ ತೃಶೂರಿನಲ್ಲಿ  ಎಂಟರ ಹರೆಯದ ಆಲ್‌ಜೋ ಎಂಬ ಬಾಲಕ ಹಾವಿನ ಕಡಿತದಿಂದ ಮೃತಪಟ್ಟಿದ್ದನು. ಅದರ ಬೆನ್ನಲ್ಲೇ ನಿನ್ನೆ ತಿರುವನಂತಪುರ ಕಾರೇಟ್ ಎಂಬಲ್ಲಿ  ಹಾವಿನ ಕಡಿತದಿಂದ ಸುಧರ್ಮ (75) ಎಂಬವರು ಮೃತಪಟ್ಟಿದ್ದಾರೆ.  ಸುಧರ್ಮ ನಿನ್ನೆ ಬೆಳಿಗ್ಗೆ ಮನೆಯ ಬಾವಿ ಸಮೀಪ ಗಿಡಗಳಿಗೆ ನೀರು ಹಾಯಿಸುತ್ತಿದ್ದಾಗ ಹಾವಿನ ಕಡಿತವುಂಟಾಗಿದೆ. ಬೊಬ್ಬೆ ಕೇಳಿದ ಮನೆಯವರು  ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಆದಿತ್ಯವಾರ ಮುಂಜಾನೆ ತೃಶೂರು ಕೋಡಾಲಿ ಎಂಬಲ್ಲಿನ ಮನೆಯೊಳಗೆ ಸಹೋದರರಾದ ಆಲ್‌ಜೋ ಹಾಗೂ ಅನೋಜ್ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು.  ಮುಂಜಾನೆ ೨ ಗಂಟೆ ವೇಳೆಗೆ ಮಕ್ಕಳಿಗೆ ಹೊಟ್ಟೆನೋವು, ನಿತ್ರಾಣ ಅನುಭವಗೊಂಡಿತ್ತೆನ್ನಲಾಗಿದೆ. ರಾತ್ರಿ ಸೇವಿಸಿದ ಆಹಾರದ ಪರಿಣಾಮ ಅಸ್ವಸ್ಥತೆಯುಂಟಾಗಿರಬಹುದೆಂದು ಮನೆಯವರು ಭಾವಿಸಿದ್ದರೆನ್ನಲಾಗಿದೆ. ಆದರೆ ಮುಂಜಾನೆ ೫ ಗಂಟೆ ವೇಳೆಗೆ ಮಕ್ಕಳು ಇನ್ನಷ್ಟು ಕ್ಷೀಣಿತರಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದರು. ಇದರಿಂದ ಆಸ್ಪತ್ರೆಗೆ ತಲುಪಿಸಿದ್ದು ವೈದ್ಯರು ತಪಾಸಣೆ ನಡೆಸಿದಾಗ ಮಕ್ಕಳ ದೇಹದಲ್ಲಿ ಹಾವಿನ ಕಡಿತದ ಗುರುತು ಪತ್ತೆಯಾಗಿದೆ. ತಕ್ಷಣ ತುರ್ತು ಚಿಕಿತ್ಸೆ ನೀಡಿದ್ದು ಆದರೆ ಆಲ್‌ಜೋನ ಜೀವ ರಕ್ಷಿಸಲಾಗಲಿಲ್ಲ. ಅನೋಜ್‌ನನ್ನು ಅಂಗಮಾಲಿಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಇದೇ ವೇಳೆ ಸಂಬಂಧಿಕರು ಹಾಗೂ ನಾಗರಿಕರು ಮಕ್ಕಳ ಮನೆ ಯಲ್ಲಿ ಪರಿಶೀಲನೆ ನಡೆಸಿದಾಗ ವಿಷ ಪೂರಿತ ಕಟ್ಟುಹಾವು ಬೆಡ್‌ರೂಂನ ತಲೆದಿಂಬಿನಡಿ ಪತ್ತೆಯಾಗಿದೆ.

ಉಷ್ಣತೆ ತೀವ್ರಗೊಂಡ ಪರಿಣಾಮ ಹಾವುಗಳು ಮನೆ ಹಾಗೂ ಪರಿಸರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಸಾಧ್ಯತೆ ಇದೆ. ಆದ್ದರಿಂದ ಜನರು ಜಾಗ್ರತೆ ಪಾಲಿಸಬೇಕೆಂದು ವನ್ಯಜೀವಿ ಸಂರಕ್ಷಕರು ತಿಳಿಸಿದ್ದಾರೆ. ತಂಪುರಕ್ತ ಜೀವಿಗಳಾದ ಹಾವುಗಳು ಉಷ್ಣತೆ ಹೆಚ್ಚಾದಾಗ ತಂಪುಪ್ರದೇಶಗಳನ್ನು ಹುಡುಕಿ ಬರುತ್ತಿವೆ. ಹೀಗೆ ಬರುವ ಹಾವುಗಳು ಮನೆಗಳು, ಶೌಚಾಲಯ, ಹೂವಿನ ಕುಂಡಗಳ ಮಧ್ಯೆ ಸಹಿತ ವಾಸಯೋಗ್ಯವಾದ ಇತರ ಸ್ಥಳಗಳಲ್ಲಿ ಅವಿತುಕೊಳ್ಳುವ ಸಾಧ್ಯತೆ ಇದೆಯೆಂದು ವನ್ಯಜೀವಿ ಸಂರಕ್ಷರು ತಿಳಿಸುತ್ತಿದ್ದಾರೆ.

RELATED NEWS

You cannot copy contents of this page