ಕುಂಬಳೆ: ನಿನ್ನೆ ರಾತ್ರಿ ಸುರಿದ ಮಳೆಯೊಂದಿಗೆ ಬೀಸಿದ ಗಾಳಿಯಿಂದ ವಿವಿಧೆಡೆ ಹಾನಿ ಸಂಭವಿಸಿದೆ.
ಕುಂಬಳೆ ಮಾವಿನಕಟ್ಟೆಯಲ್ಲಿ ರಮೇಶ್ ಎಂಬವರ ಹೆಂಚಿನ ಮನೆ ಮೇಲೆ ತೆಂಗಿನ ಮರವೊಂದು ಬಿದ್ದಿದೆ. ಇದರಿಂದ ಮನೆಗೆ ವ್ಯಾಪಕ ಹಾನಿ ಉಂಟಾಗಿದ್ದು ಭಾರೀ ನಷ್ಟವುಂಟಾಗಿ ರುವುದಾಗಿಯೂ ಹೇಳಲಾಗುತ್ತಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಕಂಚಿಕಟ್ಟೆಯಲ್ಲಿ ಸೇತುವೆ ಮೇಲೆ ತೆಂಗಿನ ಮರಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಅದೇ ರೀತಿ ಆರಿಕ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ಕಟ್ಟಡದ ಹೆಂಚು ಗಾಳಿಗೆ ಹಾರಿಗೋಗಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಮೇಲೆ ಬಿದ್ದಿದೆ. ನಿನ್ನೆ ರಾತ್ರಿ ವಿವಿಧೆಡೆಗಳಲ್ಲಿ ಮಳೆ ಸುರಿದಿದ್ದು ಇದರಿಂದ ತೀವ್ರಗೊಂಡ ಉಷ್ಣತೆಗೆ ಅಲ್ಪಶಮನವುಂಟಾಗಿದೆ. ಮಳೆಯಿಂದ ನೆಮ್ಮದಿಯಾದರೂ ಅದರ ಜತೆಗೆ ಬೀಸಿದ ಬಲವಾದ ಗಾಳಿ ಆತಂಕ ಮೂಡಿಸುತ್ತಿದೆಯೆಂದು ಜನತೆ ತಿಳಿಸುತ್ತಿದ್ದಾರೆ.






