ಪೆರ್ಲ: ಶೃಂಗೇರಿ ಮಠದ ಕಿರಿಯ ಮಠಾಧೀಶ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಏಳು ದಿನಗಳ ಕೇರಳ ಭೇಟಿಗಾಗಿ ನಿನ್ನೆ ಸಂಜೆ ಪುತ್ತೂರು ಪಾಣಾಜೆ ಮೂಲಕ ಗಡಿ ಭಾಗವಾದ ಸ್ವರ್ಗಕ್ಕೆ ಆಗಮಿಸಿದಾಗ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಡಿಜಿಪಿ ರಾವಡ ಆಜಾದ್ ಚಂದ್ರಶೇಖರ್‌ರ ನೇತೃತ್ವದಲ್ಲಿ ರಾಜ್ಯ ಸರಕಾರದ ಪರವಾಗಿ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಯಿತು. ಡಿಐಜಿ ಯತೀಶ್ಚಂದ್ರ ಐಪಿಎಸ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ವರ್ಗಕ್ಕೆ ತಲುಪಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಅರ್ಚಕ ಬೆಲ್ಲ ಮಾಧವ ಭಟ್, ಶ್ರೀಹರಿ ಭಟ್ ಸಜಂಗದ್ದೆ, ಹೃಷಿಕೇಶ ವಿ.ಎಸ್, ವಿವೇಕ ಬಿ.ಕೆ. ಸಹಿತ ಹಲವರು ಸ್ವಾಗತಿಸಿದರು.
ಕಲ್ಲಿಕೋಟೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಮೀಜಿ ನಿನ್ನೆ ಕೇರಳಕ್ಕೆ ಆಗಮಿಸಿದ್ದಾರೆ. ಈ ತಿಂಗಳ 10ರಿಂದ 13ರವರೆಗೆ ಅವರು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊಕ್ಕಾಂ ಹೂಡುವರು. ಬಳಿಕ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುವರು.
ಶೃಂಗೇರಿ ಜಗದ್ಗುರುಗಳು ತಿರುವಿದಾಂಕೂರ್ ಸಾಮ್ರಾಜ್ಯದ ರಾಜಗುರುಗಳಾಗಿದ್ದರಿಂದಾಗಿ ಕೇರಳದ ಆಡಳಿತಕ್ಕೂ ಶೃಂಗೇರಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಶೃಂಗೇರಿ ಮಠದ ಸ್ವಾಮೀಜಿಯವರು ಕೇರಳಕ್ಕೆ ಭೇಟಿ ನೀಡಿದಾಗಲೆಲ್ಲ ಅವರನ್ನು ರಾಜ್ಯದ ಅತಿಥಿಯಾಗಿ ಪರಿಗಣಿಸಿ ಪೊಲೀಸರು ಗಾರ್ಡ್ ಆಫ್ ಆನರ್ ನೀಡುತ್ತಾರೆ.






