ನೆಡುಂಕಂಡಂನಲ್ಲಿ 3ನೇ ಕೊಲೆ ಕೃತ್ಯ? ಮನೆ ಪರಿಸರದಿಂದ ತಲೆಬುರುಡೆ ಪತ್ತೆ; ನಾಪತ್ತೆಯಾದ ಮ್ಯಾಥ್ಯುವಿನದ್ದೆಂದು ಶಂಕೆ

ಇಡುಕ್ಕಿ: ನೆಡುಂಕಂಡಂನಲ್ಲಿ ತಾಯಿ ಹಾಗೂ ಸಹೋದರನನ್ನು ಕೊಂದು ಹೂತುಹಾಕಿದ ಘಟನೆಯಲ್ಲಿ ಸೆರೆಯಾದ ಸಜಿಯ ಮನೆ ಪರಿಸರದಿಂದ ಇತ್ತೀಚೆಗೆ ಮಣ್ಣು ತೆಗೆದು ನಡೆಸಿದ ತಪಾಸಣೆಯಲ್ಲಿ ಜೀರ್ಣಗೊಂಡ ಅಸ್ತಿಪಂಜರ ಹಾಗೂ ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ೮ ವರ್ಷದ ಹಿಂದೆ ನಾಪತ್ತೆಯಾದ ತಂದೆ ಮ್ಯಾಥ್ಯುರ ಮೃತದೇಹದ ಅವಶಿಷ್ಟಗಳು ಇದಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮ್ಯಾಥ್ಯುವನ್ನು ಕೂಡಾ ಸಜಿ ಕೊಲೆಗೈದು ಹೊಂಡ ತೋಡಿ ಹೂತು ಹಾಕಿರಬೇಕೆಂದು ಪೊಲೀಸರು ತಿಳಿಸುತ್ತಾರೆ.

ಈ ಮೊದಲು ಹಟ್ಟಿ ಇದ್ದ ಭಾಗದಲ್ಲಿ ಲಭಿಸಿದ ಎಲುಬು ಆದ ಕಾರಣ ಇದು ಯಾವುದಾದರೂ ದನದ ಎಲುಬು ತುಂಡು ಆಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಮೇರಿ (71), ಹಿರಿಯ ಪುತ್ರ ರೆಜಿ (54) ಎಂಬಿವರನ್ನು ಕೊಲೆಗೈದು ಹೂತು ಹಾಕಿದ ಪ್ರಕರಣದಲ್ಲಿ ಇತ್ತೀಚೆಗೆ ಸಜಿ ಸೆರೆಯಾಗಿದ್ದನು. ವಿಚಾರಣೆ ವೇಳೆ ಎಪ್ರಿಲ್ ೪ರಂದು ಇವರಿಬ್ಬರನ್ನು ಕೊಲೆಗೈದಿರುವುದಾಗಿ ಸಜಿ ಹೇಳಿಕೆ ನೀಡಿದ್ದಾನೆ. ನಾಪತ್ತೆಯಾದ ತಂದೆಯನ್ನು ಸಜಿ ಕೊಂದು ಹೂತು ಹಾಕಿರಬೇಕೆಂಬ ಶಂಕೆಯಲ್ಲಿ ನಿನ್ನೆ ಪೊಲೀಸರು ಈತನನ್ನು ಪ್ರಶ್ನಿಸಿದ್ದರು. ಆ ಬಳಿಕ ಮನೆ ಪರಿಸರದಲ್ಲಿ ಪರಿಶೀಲಿಸಲು ತನಿಖಾ ತಂಡ ತೀರ್ಮಾನಿಸಿತ್ತು. ನಿನ್ನೆ  ಕಟ್ಟಿಗೆ ರಾಶಿ ಹಾಕಿದ ಸ್ಥಳದಲ್ಲಿ ಜೆಸಿಬಿ ಉಪಯೋಗಿಸಿ ನಡೆಸಿದ ಪರಿಶೀಲನೆಯಲ್ಲಿ ಅಸ್ತಿ ಪಂಜರದ ತುಂಡುಗಳು, ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ಆ ಬಳಿಕ ಸಮೀ ಪದಲ್ಲೇ ನಡೆಸಿದ ತಪಾಸಣೆಯಲ್ಲಿ ತಲೆ ಬುರುಡೆಯ ಭಾಗಗಳನ್ನು ಕೂಡಾ ಪತ್ತೆಹಚ್ಚಲಾಗಿದೆ. ಇವುಗಳನ್ನು ಹೆಚ್ಚಿನ ತನಿಖೆಗೆ ಕಳುಹಿಸಿಕೊಡಲಾಗಿದೆ.

ಪಾಸ್ಟರ್ ಆಗಿದ್ದ ಮ್ಯಾಥ್ಯು (73) 2018 ಮೇ 5ರಿಂದ ನಾಪತ್ತೆಯಾಗಿದ್ದರು. ಇವರು ಪುತ್ರಿಯ ಮನೆಯಲ್ಲಿರಬಹುದೆಂದು ತಿಳಿದು ಮನೆ ಮಂದಿ ಪೊಲೀಸರಿಗೆ ಪ್ರಥಮವಾಗಿ ದೂರು ನೀಡಿರಲಿಲ್ಲ. ಮೇ ೯ರಂದು ಸಜಿಯ ಸಹೋದರ ರೆಜಿ ಈ ಬಗ್ಗೆ ದೂರು ನೀಡಿದ್ದಾರೆ. ಮಾನಸಿಕ ಅಸ್ವಸ್ಥತೆ ಹೊಂದಿರುವ ಕಿರಿಯ ಪುತ್ರಿ ಜಿಜಿಗೆ ಔಷಧಿ ಖರೀದಿಸಲೆಂದು ತೆರಳುವುದಾಗಿ ತಿಳಿಸಿ ಮ್ಯಾಥ್ಯು ಮನೆಯಿಂದ ಹೊರಟಿದ್ದರು. ಆರಂಭದಲ್ಲಿ ಪೊಲೀಸರು ತನಿಖೆ ನಡೆಸಿದ್ದರಾದರೂ ಬಳಿಕ ತನಿಖೆ ಮೊಟಕುಗೊಂಡಿತ್ತು. ಈಗ ಕುಟುಂಬದ ಮತ್ತಿಬ್ಬರು ಕೊಲೆಗೀಡಾದ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಮತ್ತೆ ತನಿಖೆ ತೀವ್ರಗೊಳಿಸಲಾಗಿದೆ.

RELATED NEWS

You cannot copy contents of this page