ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವತಿ ಮಲಪ್ಪುರಂ ಕೊಂಡೋಟಿ ನಿವಾಸಿಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವಕನನ್ನು ಮದುವೆಯಾದ ಬಗ್ಗೆ ಮಾಹಿತಿ ಲಭಿಸಿದೆ. ಪರಪ್ಪ ಪನ್ನಿತ್ತಡ ಎಂಬಲ್ಲಿನ 20 ಹರೆಯದ ಯುವತಿ ಬುಧವಾರ ಸಂಜೆ ನಾಪತ್ತೆಯಾಗಿದ್ದಾಳೆ. ಮೂಗಿ ಹಾಗೂ ಕಿವುಡಿಯಾದ ಯುವತಿ ತಿರುವನಂತಪುರದ ಸಂಸ್ಥೆಯೊಂದರ ವಿದ್ಯಾರ್ಥಿನಿಯಾಗಿದ್ದಾಳೆ.
ಶಿಕ್ಷಣ ಕೇಂದ್ರಕ್ಕೆಂದು ತಿಳಿಸಿ ಯುವತಿ ಮನೆಯಿಂದ ತೆರಳಿದ್ದಳು. ತಂದೆ ತಾಯಿ ಜೊತೆ ನೀಲೇಶ್ವರಕ್ಕೆ ತಲುಪಿದ ಬಳಿಕ ಯುವತಿ ರೈಲಿನಲ್ಲಿ ಪ್ರಯಾಣಿಸಿದ್ದಳು. ಗಂಟೆಗಳು ಕಳೆದ ಬಳಿಕ ಕೊಂಡೋಟಿಯಿಂದ ಒಂದು ಫೋನ್ ಕರೆ ಬಂದಾಗಲೇ ಯುವತಿ ನಾಪತ್ತೆಯಾದ ವಿಷಯ ಮನೆಯವರಿಗೆ ತಿಳಿದು ಬಂದಿದೆ. ಯುವತಿ ಹಾಗೂ 27ರ ಹರೆಯದ ತನ್ನ ಪುತ್ರ ಪ್ರೇಮದಲ್ಲಿದ್ದಾರೆಂದೂ, ಈ ಇಬ್ಬರು ಮದುವೆಯಾಗಲಿದ್ದಾರೆಂದು ಫೋನ್ ಕರೆ ಮಾಡಿದ ವಿಜಯನ್ ಎಂಬ ವ್ಯಕ್ತಿ ಯುವತಿಯ ತಂದೆಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ವೆಳ್ಳರಿಕುಂಡ್ ಪೊಲೀಸರಿಗೆ ಕೂಡಲೇ ದೂರು ನೀಡಿದ್ದಾರೆ. ಅದರ ಬೆನ್ನಲ್ಲೇ ಯುವತಿ ಹಾಗೂ ತನ್ನ ಪುತ್ರ ಮದುವೆಯಾಗಿದ್ದಾರೆ ಎಂಬ ಮಾಹಿತಿಯನ್ನು ವಿಜಯನ್ ಪೊಲೀಸ್ ಠಾಣೆಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಯುವತಿ ಹಾಗೂ ಕೊಂಡೋಟಿ ನಿವಾಸಿಯಾದ ಯುವಕ ಒಂದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು, ಯುವಕ ಹಿರಿಯ ವಿದ್ಯಾರ್ಥಿಯಾಗಿದ್ದಾನೆ. ಈ ವೇಳೆ ಈ ಇಬ್ಬರೂ ಪರಿಚಯಗೊಂಡು ಬಳಿಕ ಅವರ ಮಧ್ಯೆ ಪ್ರೇಮ ಹುಟ್ಟಿಕೊಂಡಿತ್ತೆನ್ನಲಾಗಿದೆ.






