ಕಾಸರಗೋಡು: ಪರಿಚಯ ಹೊಂದಿರುವ ಯುವತಿಯನ್ನು ನಗರದ ವಸತಿಗೃಹವೊಂದಕ್ಕೆ ಕರೆದೊಯ್ದು ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಯುವತಿಯೋರ್ವೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಯುವಕನೋರ್ವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊನ್ನೆ ಸಂಜೆ ಈ ಘಟನೆ ನಡೆದಿದೆ. ದೂರು ನೀಡಿದ ಯವತಿ ನಗರಕ್ಕೆ ಸಮೀಪದ ಪಂಚಾಯತ್ ಒಂದರ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ನಿವಾಸಿಯಾಗಿದ್ದಾಳೆ. ಆದರೆ ತನಿಖೆಯ ಅಂಗವಾಗಿ ಪೊಲೀಸರು ಆರೋಪಿಯ ಹೆಸರನ್ನು ಈ ತನಕ ಬಹಿರಂಗಪಡಿಸಿಲ್ಲ.
ನಗರಕ್ಕೆ ಬಂದಿದ್ದ ಯುವತಿಯನ್ನು ಕುಟುಂಬ ವಿಷಯದ ಬಗ್ಗೆ ಮಾತನಾಡಲಿದೆ ಎಂದು ಹೇಳಿ ಆಟೋರಿಕ್ಷಾದಲ್ಲಿ ಆರೋಪಿ ನಗರದ ವಸತಿಗೃಹವೊಂದಕ್ಕೆ ಸಾಗಿಸಿದನೆಂದೂ, ನಂತರ ಆಕೆಯ ಮೊಬೈಲ್ ಪೋನನ್ನು ಕೇಳಿ ಪಡೆದು ಆಕೆಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದನೆಂದು ಆರೋಪಿಲಾಗಿದೆ. ಆಗ ಯುವತಿ ವಿರೋಧಿಸಿದಾಗ ಆರೋಪಿ ಆಕೆಯನ್ನು ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.







