ಪಟ್ಲದಲ್ಲಿ ಪೊಲೀಸ್ ಕಾರ್ಯಾಚರಣೆ: ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ತಂಬಾಕು ಉತ್ಪನ್ನ ವಶ; ಓರ್ವ ಸೆರೆ

ಕಾಸರಗೋಡು: ಮಧೂರಿಗೆ ಸಮೀಪದ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ 21,873 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಪಟ್ಲ ಲಕ್ಷಂವೀಡ್ ಕಾಲನಿಯ ಇಬ್ರಾಹಿಂ ಬಾದಿಶಾ ಕೆ. (36) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ತಂಬಾಕು ಉತ್ಪನ್ನ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ವಿನೀಶ್ ಕುಮಾರ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಪೊಲೀಸ್ ಠಾಣೆಯ  ಎಸ್‌ಐ ಅನೂಪ್ ಪಿ.ಯವರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬಳಿ ಕಾರ್ಯಾಚರಣೆಗಿಳಿದಾಗ ಆ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಪತ್ತೆಯಾಗಿದೆ. ಎಂಟು ಗೋಣಿ ಚೀಲಗಳಲ್ಲಾಗಿ ಅದನ್ನು ಕಾರಿನಲ್ಲಿ ತುಂಬಿಸಿಡಲಾಗಿತ್ತು. ತಕ್ಷಣ ಪೊಲೀಸರು ಆ ಕಾರಿನಲ್ಲಿದ್ದ ಇಬ್ರಾಹಿಂ ಬಾದಿಶಾ ಸಹಿತ ಮಾಲು ಮತ್ತು ಆ ಕಾರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡರು.

ಸೆರೆಗೊಳಗಾದ ಇಬ್ರಾಹಿಂ ಬಾದಿಶಾ ವಿವಿಧ ವ್ಯಾಪಾರ ಸಂಸ್ಥೆಗಳಿಗೆ ತಂಬಾಕು ಉತ್ಪನ್ನಗಳನ್ನು ಪೂರೈಸುವ ವ್ಯವಹಾರದ ಪ್ರಧಾನ ಕೊಂಡಿಯಾಗಿದ್ದನೆಂದೂ, ಈ ಮಾಲನ್ನು ಆತ ಕಾಸರಗೋಡು ಮಾತ್ರವಲ್ಲದೆ ಕಣ್ಣೂರು ಮತ್ತು ಕಲ್ಲಿಕೋಟೆಗೆ ಸಾಗಿಸಲೆತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಎಸ್‌ಐಗಳಾದ ಇ. ಉಮೇಶನ್, ರಮೇಶ್, ಸಿಪಿಒಗಳಾದ ಸುಜೀಶ್, ನಜೇಶ್, ಬಿನು, ಶ್ವಾನದಳ ತಂಡದ ಸುಜಿತ್ ಮತ್ತು ಅನೀಶ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page