ಕುಂಬಳೆ: ಡೆಂಗ್ಯೂ ಜ್ವರ ಬಾಧಿಸಿ ಯುವತಿಯೋರ್ವೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಆರೋ ಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದರಂಗವಾಗಿ ಮೃತಪಟ್ಟ ಯುವತಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಮನೆ ಹಾಗೂ ಪರಿಸರ ಪ್ರದೇಶವನ್ನು ಶುಚಿಯಾಗಿಡುವಂತೆ ಆರೋಗ್ಯಾಧಿಕಾರಿಗಳು ಸಾರ್ವಜನಿ ಕರಿಗೆ ಕರೆ ನೀಡಿದ್ದಾರೆ.
ಆರಿಕ್ಕಾಡಿ ಜೋಡುಗುಳಿ ಎಂಬಲ್ಲಿನ ಮಾಧವ-ಸಂಧ್ಯಾ ದಂಪತಿಯ ಪುತ್ರಿ ಪಯಸ್ವಿನಿ(22) ಡೆಂಗ್ಯೂಜ್ವರ ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜ್ವರ ಬಾಧಿಸಿದ್ದ ಈಕೆಯನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ.
ಮೃತರು ತಂದೆ, ತಾಯಿ, ಸಹೋದರರಾದ ಸುಹಾನ್, ಯಜ್ಞೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವತಿಯ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.






