ಜಿಲ್ಲೆಯಲ್ಲಿ ಖಾಸಗಿ ಬಸ್ ಮುಷ್ಕರ ಪೂರ್ಣ: ಬಸ್ ಮಾಲಕರು, ಕಾರ್ಮಿಕರು, ಕುಟುಂಬದವರಿಂದ ಕಲೆಕ್ಟರೇಟ್‌ಗೆ ಮಾರ್ಚ್, ಧರಣಿ ಮುಷ್ಕರ 

ಕಾಸರಗೋಡು: ಪ್ರಿಯ ದರ್ಶಿನಿ ಯೋಜನೆಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ರಾಜ್ಯ ಸರಕಾರದ ಕ್ರಮ ಖಾಸಗಿ ಬಸ್‌ಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿ ಇಂದು  ಖಾಸಗಿ ಬಸ್ ಮುಷ್ಕರ ನಡೆಯುತ್ತಿದೆ.

ಇಂದು ಬೆಳಿಗ್ಗೆ ಆರಂಭ ಗೊಂಡ ಮುಷ್ಕರ ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿದೆ. ಮುಷ್ಕರ ನಿರತ ಬಸ್ ಮಾಲಕರು, ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಇಂದು ಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್‌ಗೆ ಮಾರ್ಚ್ ನಡೆಸಿ ಧರಣಿ ಮುಷ್ಕರ ಹೂಡಿದರು.

ಮಾರ್ಚ್ ನಗರದ ಅಣಂ ಗೂರಿನಿಂದ ಆರಂಭ ಗೊಂಡಿತು.    ಕಲೆಕ್ಟರೇಟ್ ಪರಿಸರದಲ್ಲಿ  ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಕೇರಳ ಪ್ರೈವೆಟ್ ಬಸ್ ಆಪರೇಟರ್ಸ್ ಜಿಲ್ಲಾಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಟಿ. ಲಕ್ಷ್ಮಣ, ಸಿಐಟಿಯು  ಜಿಲ್ಲಾ ಕಾರ್ಯದರ್ಶಿ ಕೆ. ಗಿರಿಕೃಷ್ಣನ್, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಮೊದಲಾದವರು ಮಾರ್ಚ್‌ಗೆ ನೇತೃತ್ವ ನೀಡಿದರು.

ಜಿಲ್ಲೆಯಲ್ಲಿ  ಖಾಸಗಿ ಬಸ್ ಮುಷ್ಕರದಿಂದ ಪ್ರಯಾಣಿಕರು ತೀವ್ರ ಸಂಕಷ್ಟ  ಎದುರಿಸಬೇಕಾಗಿ ಬಂದಿದೆ. ವಿಶೇಷವಾಗಿ ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿಸಿದೆ.   ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ  ಭಾರೀ ದಟ್ಟಣೆ  ಕಂಡುಬಂದಿದೆ.  ಕನಿಷ್ಠ ಕಾಲು ಇರಿಸಲೂ ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರ ನಿಬಿಢತೆ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಂಡುಬರುತ್ತಿದೆ.  

You cannot copy contents of this page