ಕುಂಬಳೆ: ಯುವಕನನ್ನು ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಮೊಗ್ರಾಲ್‌ನಲ್ಲಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಯುವಕನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ ಹಲವು ವರ್ಷಗಳಿಂದ ಮೊಗ್ರಾಲ್ ಕೊಪ್ಪಳದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ ಗಫೂರ್ (45) ಗಂಭೀರ ಸುಟ್ಟು ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇಂದು ಮುಂಜಾನೆ 5.30ರ ವೇಳೆ ಮೊಗ್ರಾಲ್ ರೈಲ್ವೇ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದೆ. ಸಾರಣೆ ಮೇಸ್ತ್ರಿಯಾದ ಅಬ್ದುಲ್ ಗಫೂರ್ ಎಂದಿನಂತೆ ಕ್ವಾರ್ಟರ್ಸ್‌ನಿಂದ ಇಂದು ಮುಂಜಾನೆ ಹೊರಟು ರಾಷ್ಟ್ರೀಯ ಹೆದ್ದಾರಿಗೆ ನಡೆದು ಹೋಗುತ್ತಿದ್ದರು. ರೈಲ್ವೇ ಕೆಳಸೇತುವೆಗೆ ತಲುಪಿದಾಗ ಸಮೀಪದ ಪೊದೆಗಳಲ್ಲಿ ಅಡಗಿ ನಿಂತಿದ್ದ ನಾಲ್ಕು ಮಂದಿ ತಂಡ ದಿಢೀರ್ ಅವರ ಮುಂದೆ ತಲುಪಿ ತಡೆದು ನಿಲ್ಲಿಸಿದೆ. ಈ ಮಧ್ಯೆ ಓರ್ವ ಅಬ್ದುಲ್ ಗಫೂರ್‌ರ ದೇಹಕ್ಕೆ ಸೀಮೆ ಎಣ್ಣೆ ಸುರಿದಿದ್ದು ಇನ್ನೋರ್ವ ಬೆಂಕಿ ಹಚ್ಚಿದ್ದಾನೆ. ಬೆಂಕಿ ದೇಹಕ್ಕೆ ಹತ್ತಿಕೊಂಡ ತಕ್ಷಣ ಅಬ್ದುಲ್ ಗಫೂರ್‌ರನ್ನು ಉಪೇಕ್ಷಿಸಿ ದುಷ್ಕರ್ಮಿ ಗಳು ಓಡಿ ಪರಾರಿಯಾಗಿದ್ದಾರೆ. ಯುವಕನ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಬೆಂಕಿ ನಂದಿಸಿದ ಬಳಿಕ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಅಬ್ದುಲ್ ಗಫೂರ್ ಜೀವಾಪಾಯದಿಂದ ಪಾರಾಗಿದ್ದಾರೆ. ಶರವಣನ್, ಲಿಂಗಂ, ಮೇರಿ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವ ಸೇರಿ ತನ್ನ ಮೇಲೆ ಆಕ್ರಮಣ ನಡೆಸಿರುವುದಾಗಿ ಅಬ್ದುಲ್ ಗಫೂರ್ ಆರೋಪಿಸಿದ್ದಾರೆ.
ಸೀತಾಂಗೋಳಿಯ ಕಟ್ಟಡವೊಂದರ ಸಾರಣೆ ಕೆಲಸ ನಡೆಸಿದ ವತಿಯಿಂದ ಹಲ್ಲೆಗೈದ ತಂಡಕ್ಕೆ 3000 ರೂಪಾಯಿ ಕೊಡಲು ಬಾಕಿಯಿದೆಯೆಂದು ಹೇಳಲಾಗುತ್ತಿದೆ. ಕೆಲಸ ವಹಿಸಿಕೊಟ್ಟ ಇಂಜಿನಿಯರ್ 18 ಸಾವಿರ ರೂಪಾಯಿ ನೀಡಲು ಬಾಕಿಯಿದೆ. ಅದು ಲಭಿಸಿದೊಡನೆ ಹಣ ನೀಡುವುದಾಗಿ ಕಾರ್ಮಿಕರಿಗೆ ತಿಳಿಸಿರುವುದಾಗಿಯೂ ಅಬ್ದುಲ್ ಗಫೂರ್ ಹೇಳಿದ್ದಾರೆ. ನಿನ್ನೆ ಪೊಲೀಸನೆಂದು ತಿಳಿಸಿ ಓರ್ವ ಫೋನ್ ಕರೆಮಾಡಿ ಬೆದರಿಕೆಯೊಡ್ಡಿರುವು ದಾಗಿಯೂ ಆಕ್ರಮಣಕ್ಕೆಡೆಯಾದ ಅಬ್ದುಲ್ ಗಫೂರ್ ತಿಳಿಸಿದ್ದಾರೆ. ಅಬ್ದುಲ್ ಗಫೂರ್‌ರ ಮೇಲೆ ನಡೆದ ಆಕ್ರಮಣ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಮೇರಿ ಹಾಗೂ ಇತರರು ತಳಂಗರೆ ಮಾಲಿಕ್ ದೀನಾರ್ ಮಸೀದಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.





