ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶÀಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಮುಸೋಡಿ, ಮಣಿಮುಂಡ, ಹನುಮಾನ್ ನಗರ, ಐಲ ಶಿವಾಜಿನಗರ, ಪೆರಿಂಗಡಿ, ಕುದುಪುಳು ಸಹಿತ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಹಲವಾರು ಮನೆಗಳು ಅಪಾಯದಂಚಿನಲ್ಲಿದೆ. ಐಲ ಶಿವಾಜಿನಗರದಲ್ಲಿ ಕಳೆದ ವರ್ಷ ಮೀನುಗಾರರು ಬಲೆಗಳನ್ನು ದುರಸ್ತಿಗೊಳಿಸುವ ಶೆಡ್ಡ್ ಕಡಲ್ಕೊರೆತಕ್ಕೆ ಸಿಲುಕಿ ಕುಸಿದು ಬಿದ್ದಿತ್ತು. ಇದರಿಂದ ಈ ಪ್ರದೇಶದ ಮೀನು ಕಾರ್ಮಿಕರು ಸಮಸ್ಯೆಗೀಡಾಗಿದ್ದರು. ಈ ವರ್ಷವೂ ಕಡಲ್ಕೊರೆತ ಮುಂದುವರಿಯುತ್ತಿದ್ದು, ಈ ಪರಿಸರದಲ್ಲಿರುವ ರುದ್ರಭೂಮಿಯ ಶೆಡ್ಡ್, ರಸ್ತೆ ಸಮುದ್ರ ಪಾಲಗುವ ಭೀತಿ ಇದೆ. ವಿವಿಧೆಡೆ ತಡೆಗೋಡೆಗಳು ಇಲ್ಲದಿರುವುದರಿಂದ ಅಲೆಗಳ ಅಬ್ಬರಕ್ಕೆ ಭೂಮಿ ಸಮುದ್ರಪಾಲಾಗುತ್ತಿದ್ದು, ಮೀನು ಕಾರ್ಮಿಕರ ಕುಟುಂಬ ಆತಂಕದಲ್ಲೇ ದಿನ ಕಳೆಯುತ್ತಿದೆ. ವ್ಯವಸ್ಥಿತ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಹಲವು ಭಾರಿ ಊರವರು ಮನವಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲವೆಂದು ಆರೋಪಿಸಿದ್ದಾರೆ.






