ಕಾಸರಗೋಡು: ನೀಲೇಶ್ವರ ನಗರಸಭೆಯ ವ್ಯಾಪ್ತಿಗೊಳಪಟ್ಟ ಚಾತಮತ್ತ್‌ನಲ್ಲಿ ನಡೆದ ಸಮಾರಂಭ ವೊಂದರಲ್ಲಿ ಆಹಾರ ಸೇವಿಸಿದ ಬಳಿಕ ವಾಂತಿಭೇದಿಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟವರಲ್ಲಿ ಐದು ಮಂದಿಯಲ್ಲಿ ಶಿಗೆಲ್ಲಾ ಪೊಸಿಟಿವ್ ಸೋಂಕು ಪತ್ತೆಯಾಗಿದೆ.
ಈ ಸಮಾರಂಭದಲ್ಲಿ ಏರ್ಪಡಿಸ ಲಾದ ಔತಣಕೂಟದಲ್ಲಿ ಭಾಗವಹಿಸಿ ದ್ದವರಲ್ಲಿ 74 ಮಂದಿ ತೀವ್ರ ವಾಂತಿಭೇದಿ ಇತ್ಯಾದಿ ದೈಹಿಕ ಅಸ್ವಸ್ಥತೆ ಅನುಭವಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇವರೆಲ್ಲರ ದೇಹದ ಸ್ಯಾಂಪಲ್ ಗಳನ್ನು ಕಣ್ಣೂರಿನ ರೀಜಿ ನಲ್ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿ ಕೊ ಡಲಾಗಿತ್ತು. ಇದರ ವರದಿ ಆರೋಗ್ಯ ಇಲಾಖೆಯ ಸಂಬಂಧಪಟ್ಟ ವರಿಗೆ ಲಭಿಸಿದ್ದು, ಇದರಲ್ಲಿ ಐದು ಮಂದಿಯಲ್ಲಿ ಮಾರಕ ಸೋಂಕು ಕಾಯಿಲೆಯಾದ ಶಿಗೆಲ್ಲಾ ಪೊಸಿಟಿವ್ ಪತ್ತೆಯಾಗಿದೆ. ಇದರಲ್ಲಿ ನಾಲ್ವರು ಮಕ್ಕಳಾಗಿದ್ದಾರೆ. ಈ ವರದಿ ಹೊರಬಂದ ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿ ನೀಲೇಶ್ವರ ತಾಲೂಕು ಆಸ್ಪತ್ರೆಗೆ ಆಗಮಿಸಿ ತುರ್ತಾಗಿ ಎಲ್ಲೆಡೆಗಳಲ್ಲಿ ಜಾಗ್ರತಾ ನಿರ್ದೇಶ ನೀಡಿದ್ದಾರೆ. ರ‍್ಯಾಪಿಡ್ ರೆಸ್ಪೋನ್ಸ್ ಟೀಂ ಕೂಡಾ ಇಂದು ನೀಲೇಶ್ವರಕ್ಕೆ ತಲುಪಿದ್ದು ಅಗತ್ಯದ ಮುಂಜಾಗ್ರತಾ ಕ್ರಮದಲ್ಲಿ ತೊಡಗಿದೆ. ಶಿಗಲ್ಲಾ ಪೊಸಿಟಿವ್ ಪತ್ತೆಯಾದ ಐದು ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆಯೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.






