ಡಾ. ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಕನ್ನಡಭವನ ಉದ್ಘಾಟನೆ ಬಗ್ಗೆ  ತೀರ್ಮಾನಿಸಲು ಗಡಿ ಪ್ರಾಧಿಕಾರ ಪದಾಧಿಕಾರಿಗಳಿಂದ ಮುಖ್ಯಮಂತ್ರಿ ಭೇಟಿ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಡಾ. ಕಯ್ಯಾರ ಕಿಂಞಣ್ಣ ರೈಯವರ ಹೆಸರಲ್ಲಿ ಬದಿಯಡ್ಕದಲ್ಲಿ ನಿರ್ಮಿಸಲಾದ ಕನ್ನಡ ಭವನ ಉದ್ಘಾಟನೆಗೆ ಕೇರಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಗಡಿ ಪ್ರಾಧಿಕಾರದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.

ಇದೇ ವೇಳೆ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕೈಗೊಳ್ಳಲು ಮುಖ್ಯಮಂತ್ರಿಗೆ ಮನವಿ ನೀಡಲಾಯಿತು. ಕಿಂಞಣ್ಣ ರೈಯವರ ಹೆಸರಲ್ಲಿ ಬದಿಯಡ್ಕದಲ್ಲಿ ನಿರ್ಮಿಸಲಾದ ಕನ್ನಡ ಭವನ ಉದ್ಘಾಟನೆ ದಿನಾಂಕ ನಿಗದಿಪಡಿಸಲು ಕರ್ನಾಟಕ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಂಡಕ್ಕೆ ಭರವಸೆ ನೀಡಿದರು. ಇದೇ ವೇಳೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿಯೂ ಅವರು ತಿಳಿಸಿದರು.

ಮುಖ್ಯಮಂತ್ರಿ ವಿ.ಡಿ. ಸತೀಶನ್‌ರನ್ನು ಭೇಟಿಯಾದ ತಂಡದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಶಾಸಕ ಎಕೆಎಂ ಅಶ್ರಫ್, ಡಾ. ಪ್ರಸನ್ನ ರೈ, ಕ.ಸಾ.ಪ ಗಡಿನಾಡ ಘಟಕ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಾಹಿನ್ ಕೇಳೋಟ್ ಬದಿಯಡ್ಕ, ಝಡ್.ಎ. ಕಯ್ಯಾರ್, ಡಾ. ಮಲ್ಲಿಕಾರ್ಜುನ್ ನಾಸಿ, ಶರೀನ್ ಮೊಹಮ್ಮದ್, ಗಡಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಉಪಸ್ಥಿತರಿದ್ದರು.

You cannot copy contents of this page