ಕುಂಬಳೆ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣ, ದಾಖಲೆಪತ್ರಗಳನ್ನೊಳ ಗೊಂಡ ಪರ್ಸ್‌ನ್ನು ಶಾಲಾ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ವಿದ್ಯಾರ್ಥಿಗಳಾದ ಶರ್ವಾಸ್, ಅಕ್ಷರ್, ಅಫೀಸ್, ಇರ್ಫಾನ್, ಮಿಥ್ಲಾಜ್ ಎಂಬಿವರು ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಆರಿಕ್ಕಾಡಿ ತಂಙಳ್‌ರ ಮನೆ ಬಳಿಯ ರಸ್ತೆ ಬದಿಯಲ್ಲಿ ಪರ್ಸ್ ಬಿದ್ದು ಸಿಕ್ಕಿದೆ. ವಿದ್ಯಾರ್ಥಿಗಳು ಪರ್ಸ್ ತೆರೆದು ನೋಡಿದಾಗ ಅದರಲ್ಲಿ ಹಣ, ಎಟಿಎಂ ಕಾರ್ಡ್, ಪಾನ್ ಕಾರ್ಡ್ ಸಹಿತ ದಾಖಲೆಪತ್ರಗಳಿದ್ದವು. ಕೂಡಲೇ ವಿದ್ಯಾರ್ಥಿಗಳು ಕುಂಬಳೆ ಪೊಲೀಸ್ ಠಾಣೆಗೆ ತಲುಪಿ ಪರ್ಸ್ ನೀಡಿದ್ದಾರೆ. ಪೊಲೀಸರು ಪರ್ಸ್‌ನಲ್ಲಿದ್ದ ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಅದು ಮೊಗ್ರಾಲ್ ಪುತ್ತೂರಿನ ನಫೀಸರದ್ದೆಂದು ತಿಳಿದುಬಂತು. ಈ ಬಗ್ಗೆ ಪೊಲೀಸರು ನಫೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ನಫೀಸ ಪೊಲೀಸ್ ಠಾಣೆಗೆ ತಲುಪಿ ಪರ್ಸ್‌ನ್ನು ಪೊಲೀಸರಿಂದ ಪಡೆದುಕೊಂಡರು. ಬಿದ್ದು ಸಿಕ್ಕಿದ ಪರ್ಸ್‌ನ್ನು ತಕ್ಷಣ ಪೊಲೀಸ್ ಠಾಣೆಗೆ ತಲುಪಿಸಿ ಮಾನವೀಯತೆ ಮೆರೆದ ಈ ಐದು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು, ನಾಗರಿಕರು ಹಾಗೂ ಶಾಲಾ ಪಿಟಿಎ ಅಭಿನಂದಿಸಿದೆ.






