ಕಾಸರಗೋಡು: ಉದ್ಯೋಗ ಅರಸುತ್ತಿರುವ ಯುವಕರನ್ನು, ಪಿಎಸ್ಸಿ ರ್ಯಾಂಕ್ ವಿಜೇತರನ್ನು ವಂಚಿಸುವ ವಿಷಯದಲ್ಲಿ ವಿ.ಡಿ. ಸತೀಶನ್ ಸರಕಾರ, ಪಿಣರಾಯಿ ಸರಕಾರದ ಹಾದಿಯಲ್ಲೇ ಸಾಗುತ್ತಿದೆ ಎಂದು ಪಿಎಸ್ಸಿ ಎಂದರೆ ಈಗ ‘ಪಿಣರಾಯಿ ಸತೀಶನ್ ಸರ್ವೀಸ್ ಕಮಿಶನ್’ ಆಗಿ ಬದಲಾಗಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರುಣ್ ಪ್ರಸಾದ್ ಆರೋಪಿಸಿದರು.
ಪಿಎಸ್ಸಿ ಅವ್ಯವಹಾರ ವಿರುದ್ಧ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನಡೆಸಿದ ಕಲೆಕ್ಟ್ರೇಟ್ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಹಾಗೂ ಪ್ರಸ್ತುತ ಯುವಜನಕ್ಷೇಮ ಸಚಿವರಾಗಿ ರುವ ಒ.ಜೆ. ಜನೀಶ್ ಸೆಕ್ರೆಟರಿಯೇಟ್ ಮುಂಭಾಗ ಮುಷ್ಕರನಿರತರಾಗಿರುವ ಉದ್ಯೋಗಾರ್ಥಿಗಳ ಸಮಸ್ಯೆಯನ್ನು ಆಲಿಸಲು ಕೂಡಾ ಸಿದ್ಧರಾಗುತ್ತಿಲ್ಲವೆಂದು ಅವರು ಆರೋಪಿಸಿದರು. ಪಿಣರಾಯಿ ವಿಜಯನ್ ನೇತೃತ್ವದ ಈ ಹಿಂದಿನ ಸರಕಾರ ಹಾಗೂ ವಿ.ಡಿ. ಸತೀಶನ್ ಮುನ್ನಡೆಸುವ ಈಗಿನ ಸರಕಾರ ಉದ್ಯೋಗಾರ್ಥಿಗಳ ಬದುಕಲ್ಲಿ ಕಾಲ್ಚೆಂಡಾಟ ಆಡುತ್ತಿದೆ ಎಂದು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಯುವಮೋರ್ಚಾ ಪ್ರತಿಭಟನೆ ತೀವ್ರಗೊಳಿಸಲಿದೆ ಎಂದು ಅವರು ನುಡಿದರು.
ಕೇರಳದ ಹೊರಗಿರುವ ಮುಷ್ಕರಗಳಿಗೆ ಬೆಂಬಲ ಸೂಚಿಸಿ ತಲುಪುವ ಸಚಿವರು, ಶಾಸಕರು ರಾಜ್ಯದ ಆಡಳಿತ ಕೇಂದ್ರವಾದ ಸೆಕ್ರೆಟರಿಯೇಟ್ ಮುಂಭಾಗ ನಡೆಯುವ ಯುವಜನರ ಹೋರಾಟವನ್ನು ಕಂಡಿಲ್ಲವೆಂದು ನಟಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಪಿಎಸ್ಸಿ ಅವ್ಯವಹಾರಗಳು ಯುವಜನಾಂಗವನ್ನು ತೀವ್ರ ನಿರಾಶೆಗೊಡ್ಡಿದೆ ಎಂದು ರಾಜ್ಯದ ಅತ್ಯಂತ ಹಿಂದುಳಿದಿರುವ ಜಿಲ್ಲೆಗಳಲ್ಲೊಂದಾದ ಕಾಸರಗೋಡಿನಿಂದ ಭಾರೀ ಮಟ್ಟದಲ್ಲಿ ಯುವಕರು ಇತರ ರಾಜ್ಯಗಳಿಗೆ ಉದ್ಯೋಗ ಅರಸಿ ತೆರಳುತ್ತಿರುವುದು ಆತಂಕಿತವಾಗಿದೆ ಎಂದು ಅವರು ನುಡಿದರು.
ಮಾರ್ಚ್ನಲ್ಲಿ ಬಾರಿಕೇಡ್ ದಾಟಲು ಕಾರ್ಯಕರ್ತರು ಯತ್ನಿಸಿದಾಗ ಪೊಲೀಸ್ ಹಾಗೂ ಕಾರ್ಯಕರ್ತರ ಮಧ್ಯೆ ಹೊ-ಕೈ ಉಂಟಾಯಿತು. ಬಳಿಕ ಪೊಲೀಸರು ಜಲಪೀರಂಗಿ ಪ್ರಯೋಗಿಸಿದರು. ಅಶ್ವಿನ್ ಕೊಲ್ಲಾಲಯಿಲ್ ಅಧ್ಯಕ್ಷತೆ ವಹಿಸಿದರು. ಎನ್.ವಿ. ಶ್ರುತಿ ಪೊಯ್ಲೂರು, ಪಿ.ಆರ್. ಸುನಿಲ್ ಕುಮಾರ್, ಮಹೇಶ್ ಗೋಪಾಲ್, ಎಚ್.ಎನ್. ಧನುಷ್, ಶ್ರುತಿ ವಿನೋದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರಮಣಿ ಬಳಾಲ್, ನಾರಾಯಣ ನಾಯ್ಕ್, ಸಾಗರ್ ಚಾತಮತ್ ಮಾತನಾಡಿದರು.







