ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ಅಪಹರಿಸಲೆತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಂಗವಾಗಿ ಘಟನೆ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಸಂಗ್ರಹಿಸಲಾಗಿದೆ.
ಭಾಸ್ಕರನಗರದ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುವ ಉತ್ತರಭಾರತದ ಕುಟುಂಬವೊಂದರ ಬಾಲಕನನ್ನು ಅಪಹರಿಸಲು ಯತ್ನ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ಲಭಿಸಿದ ದೂರಿನಲ್ಲಿ ಈ ರೀತಿ ತಿಳಿಸಲಾಗಿದೆ-“ನಿನ್ನೆ ಮಧ್ಯಾಹ್ನ 12.30ರ ವೇಳೆ ಘಟನೆ ನಡೆದಿದೆ. ಕುಟುಂಬದ ಮಗುವೊಂದಕ್ಕೆ ಅಂಗನವಾಡಿಯಿಂದ ಉಚಿತವಾಗಿ ಆಹಾರ ಲಭಿಸುತ್ತಿದೆ. ಇದನ್ನು ತರಲು ಏಳರ ಕರೆಯದ ಬಾಲಕನನ್ನು ಅಂಗನವಾಡಿಗೆ ಕಳುಹಿಸಲಾಗಿದೆ. ಬಾಲಕ ಅಂಗನ ವಾಡಿಯಿಂದ ಆಹಾರ ಪಡೆದು ಕ್ವಾರ್ಟರ್ಸ್ಗೆ ಮರಳುತ್ತಿದ್ದಾಗ ಕಾರಿನಲ್ಲಿ ಇಬ್ಬರು ತಲುಪಿದ್ದಾರೆ. ಕಾರಿನಲ್ಲಿದ್ದ ಇಬ್ಬರೂ ಮಾಸ್ಕ್ ಧರಿಸಿದ್ದರು. ಬಾಲಕನ ಸಮೀಪದಲ್ಲಿ ಕಾರು ನಿಲ್ಲಿಸಿದ ಬಳಿಕ ಕಾರಿಗೆ ಹತ್ತುವಂತೆ ಬಾಲಕನಲ್ಲಿ ತಂಡ ತಿಳಿಸಿದೆ. ಮನೆಗೆ ತಲುಪಿಸುವುದಾಗಿ ತಿಳಿಸಿ ಬಾಲಕನನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು ಈ ವೇಳೆ ಬಾಲಕ ಓಡಿ ಪಾರಾಗಿದ್ದನು. ಮನೆಗೆ ತಲುಪಿದ ಬಾಲಕ ಈ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ಅಲ್ಲದೆ ಬಾಲಕ ಕೊಠಡಿಯಿಂದ ಹೊರಗೆ ಹೋಗದೆ, ಯಾರೊಂದಿಗೂ ಮಾತನಾಡದೆ ಕುಳಿತಿದ್ದನು. ಸಂಜೆ ವೇಳೆ ತಂದೆ ತಲುಪಿ ಬಾಲಕನಲ್ಲಿ ವಿಚಾರಿಸಿದಾಗ ಕಾರಿನಲ್ಲಿ ತಂಡ ಅಪಹರಿಸಲು ಯತ್ನಿಸಿದ ವಿಷಯವನ್ನು ಬಾಲಕ ತಿಳಿಸಿದ್ದಾನೆ”. ಇದರಂತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.






