ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಮಂಡಲದ ಮೀನುಗಾರಿಕಾ ವಲಯದ ಪ್ರಧಾನ ಆಶಯವಾದ ಮಂಜೇಶ್ವರ ಫಿಶ್ಶಿಂಗ್ ಹಾರ್ಬರ್ಗೆ 1೦ ವರ್ಷದ ಬಳಿಕ ಮತ್ತೆ ಸರಕಾರದ ಪರಿಗಣನೆ ಉಂಟಾಗಿದೆ. ಹಾರ್ಬರ್ನ ಸಮಗ್ರ ನವೀಕರಣೆಗಾಗಿ ನಬಾರ್ಡ್ ಯೋಜನೆಯಲ್ಲಿ ಒಳಪಡಿಸಿ 57.84 ಕೋಟಿ ರೂ.ವನ್ನು ಸರಕಾರ ಮಂಜೂರು ಮಾಡಿದೆ. ಕಳೆದ ಉಮ್ಮನ್ಚಾಂಡಿ ಸರಕಾರದ ಕಾಲದಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರನ್ನು ಮಂಜೂರು ಮಾಡಲಾಗಿತ್ತು. ಆ ಬಳಿಕ ಅಗತ್ಯದ ಮೊತ್ತ ಮೀಸಲಿರಿಸಿ ನಿರ್ಮಾಣ ಆರಂಭಿಸಲಾಗಿದ್ದು, ಆದರೆ ಆ ಬಳಿಕದ ಹತ್ತು ವರ್ಷದಲ್ಲಿ ಬಂದರಿಗೆ ಅಗತ್ಯದ ಮೊತ್ತ ಲಭ್ಯವಾಗದಿರುವುದು ದೊಡ್ಡ ಹೊಡೆತವಾಗಿತ್ತು ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ವರ್ಷಗಳಿಂದ ಬಂದರಿನ ಡ್ರಜ್ಜಿಂಗ್ ನಡೆಯದ ಹಿನ್ನೆಲೆಯಲ್ಲಿ ಹೊಯ್ಗೆ ಸಂಗ್ರಹವಾಗುವುದು ಸಾಮಾನ್ಯವಾಗಿತ್ತು. ಇದರಿಂದಾಗಿ ಮೀನುಗಾರಿಕಾ ದೋಣಿಗಳು ಮಗುಚುವುದು ಅಲ್ಲದೆ ದೋಣಿಗಳನ್ನು ಸರಿಯಾಗಿ ದಡಕ್ಕೆ ತರಲು ಸಾಧ್ಯವಾಗದೆ ಮೀನು ಕಾರ್ಮಿಕರು ಸಂದಿಗ್ಧತೆಯಲ್ಲಿದ್ದರು. ಕಡಲ್ಕೊರೆತ ತಡೆಯುವುದಕ್ಕೆ, ಬಂದರಿನ ಸಂರಕ್ಷಣೆಗೆ ಅಗತ್ಯದ ಟೆಟ್ರಾಪೋಡ್ ವ್ಯವಸ್ಥೆಗಳು ಇಲ್ಲದಿರುವುದು, ಬಂದರಿಗೆ ತೆರಳುವ ರಸ್ತೆಯ ಶೋಚನೀಯಾವಸ್ಥೆ ಈ ವಲಯದ ಅಭಿವೃದ್ಧಿಗೆ ತಡೆಯಾಗಿತ್ತು. ಈ ವಿಷಯವನ್ನು ಮಂಡಿಸಿ ಕಳೆದ ಸರಕಾರದ ಕಾಲದಲ್ಲಿ ವಿಧಾನಸಭೆಯಲ್ಲೂ ಹಾಗೂ ಸಚಿವರಿಗೆ ಹಲವು ಬಾರಿ ಶಾಸಕ ನೇರವಾಗಿ ಮನವಿ ನೀಡಿದ್ದರು. ಬಳಿಕ ಹೊಸ ಸರಕಾರ ಅಧಿಕಾರಕ್ಕೇರಿದ್ದು ವಿಧಾನಸಭೆಯ ಗಣನೆಗೆ ಹಾಗೂ ಮುಖ್ಯಮಂತ್ರಿಯ, ಮೀನುಗಾರಿಕಾ ಇಲಾಖೆ ಸಚಿವ ವಿ.ಇ. ಅಬ್ದುಲ್ ಗಫೂರ್ರ ಗಮನಕ್ಕೆ ಬಂದರಿನ ಶೋಚನೀಯಾವಸ್ಥೆಯ ಬಗ್ಗೆ ತಿಳಿಸಿದಾಗ ಸರಕಾರದ ಪ್ರತ್ಯೇಕ ಪರಿಗಣನೆ ಈ ಯೋಜನೆಗೆ ಲಭ್ಯಗೊಳಿಸಲು ಸಾಧ್ಯವಾಯಿತು.
ಬಂದರಿಗೆ ಪ್ರಸ್ತುತ ಲಭಿಸಿದ ಮೊತ್ತದ ವಿವರಗಳು ಹೀಗಿವೆ.
ಫಿಶ್ಶಿಂಗ್ ಹಾರ್ಬರ್ನ ಡ್ರಜ್ಜಿಂಗ್: 12.41 ಕೋಟಿ ರೂ, ಹಾರ್ಬರ್ ರಸ್ತೆ ಅಭಿವೃದ್ಧಿ 4 ಕೋಟಿ ರೂ, ದಕ್ಷಿಣ ಉತ್ತರ ಬ್ರೇಕ್ ವಾಟರ್ಗಳ ಪುನರುದ್ಧಾರ, ಟೆಟ್ರಾಪೋಡ್ಗಳನ್ನು ಉಪಯೋಗಿಸಿರುವ ತೀರ ಸಂರಕ್ಷಣೆ: 36.18 ಕೋಟಿ ರೂ. ಈ ಯೋಜನೆಗಳು ಸಾಕಾರಗೊಂಡರೆ ಮಂಜೇಶ್ವರ ಬಂದರಿನ ಪ್ರಧಾನ ಪ್ರಾಯೋಗಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಉಂಟಾಗಲಿದೆ. ಅಲ್ಲದೆ ಈ ಬಾರಿಯ ಮುಂಗಡ ಪತ್ರದಲ್ಲಿ ಹಾರ್ಬರ್ನ ಇಕ್ಕಡೆಗಳಲ್ಲಿರುವ ಮಂಜೇಶ್ವರ, ಮುಸೋಡಿ ಪ್ರದೇಶಗಳಲ್ಲಿ ಸಣ್ಣ ದೋಣಿಗಳನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸುವಂತಹ ಬೋಟ್ ಜೆಟ್ಟಿಗಳನ್ನು ನಿರ್ಮಿಸಲು ಮೊತ್ತ ಮೀಸಲಿರಿಸಲಾಗಿದೆ. ಈ ಕಾಮಗಾರಿ ಕೂಡಾ ಪೂರ್ತಿಯಾಗುವುದರೊಂದಿಗೆ ಹಾರ್ಬರ್ ಪೂರ್ಣ ರೀತಿಯಲ್ಲಿ ಉಪಯೋಗಪ್ರದಗೊಳಿಸಲು ಸಾಧ್ಯವಾಗಲಿದೆ.







