ಸೀತಾಂಗೋಳಿ: ಕುಂಜಾರು ಪ್ರದೇಶದ ನಿವಾಸಿಗಳು ಸಂಚಾರ ಸಮಸ್ಯೆಯಿಂದ ಬಳಲುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ದರ್ಭೆತ್ತಡ್ಕದಿಂದ ಕುಂಜಾರುಗೆ ತೆರಳುವ ರಸ್ತೆ ಶೋಚನೀಯಗೊಂಡು ಸಂಚಾರವೇ ದುಸ್ತರವಾಗಿದ್ದರೂ ದುರಸ್ತಿಗೆ ಕ್ರಮವುಂಟಾಗುವುದಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಸುಮಾರು 3ಕಿಲೋ ಮೀಟರ್ ದೂರದ ಈ ರಸ್ತೆಯಲ್ಲಿ 100 ಮೀಟರ್‌ನಷ್ಟು ಕಾಂಕ್ರೀಟ್ ಹಾಕಲಾಗಿದ್ದರೂ ಉಳಿದ ಕಡೆ ರಸ್ತೆ ಕೆಸರುಗದ್ದೆಯಂತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಕೂಡಾ ಸ್ಥಳೀಯರಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ.
ಸ್ಥಳೀಯರು ಸೇರಿ ಜಲ್ಲಿಹುಡಿ ತಂದು ಹೊಂಡಗಳಿಗೆ ಹಾಕಿದ್ದರಾದರೂ ಮಳೆ ಹಿನ್ನೆಲೆಯಲ್ಲಿ ಅದು ಕೆಸರಿನೊಂದಿಗೆ ಸೇರಿಕೊಂಡಿದೆ. ಬದಿಯಡ್ಕ ಪಂಚಾಯತ್‌ನ 21ನೇ ವಾರ್ಡ್‌ಗೊಳಪಟ್ಟ ಈ ರಸ್ತೆ ಬಗ್ಗೆ ಗ್ರಾಮಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ಸ್ಥಳೀಯರು ಸೂಚಿಸಿದರೂ ಫಲ ಉಂಟಾಗಿಲ್ಲವೆಂದು ದೂರಲಾಗಿದೆ.
ಸುಮಾರು ೧೫ ಕುಟುಂಬಗಳು ಈ ಪ್ರದೇಶದಲ್ಲಿದ್ದು ಅಸೌಖ್ಯ ತಗಲಿದವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕೂಡಾ ಸಮಸ್ಯೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಮಳೆಗಾಲವಾದ ಕಾರಣ ರಸ್ತೆಯಲ್ಲಿ ಕೆಸರು, ನೀರು ಕಟ್ಟಿ ನಿಲ್ಲುತ್ತಿದ್ದು, ನಡೆದಾಡಲು ಕೂಡಾ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ರಸ್ತೆ ದುರಸ್ತಿಗೊಳಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.







