ಕೊಚ್ಚಿ: ಶಾಲಾ ರಸಪ್ರಶ್ನೆ ಸ್ಪರ್ಧೆಗಾಗಿ ವಿ.ಡಿ. ಸಾವರ್ಕರ್ ಹೆಸರಿನ ಪ್ರಶ್ನೆ ಸಿದ್ಧಪಡಿಸಿದ ಘಟನೆಯಲ್ಲಿ ಅಧ್ಯಾಪಕನನ್ನು ಅಮಾನತುಗೊಳಿಸಿದ ಸರಕಾರದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಒಂದು ತಿಂಗಳ ವರೆಗೆ ಈ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಒಂದು ತಿಂಗಳೊಳಗೆ ತನಿಖೆ ಪೂರ್ತಿಗೊಳಿಸಿ ಅಧ್ಯಾಪಕನ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆಯೆಂದು ನ್ಯಾಯಾಲಯ ನಿರ್ದೇಶ ನೀಡಿದೆ. ಅದರೆ ತುರ್ತು ಶಿಸ್ತುಕ್ರಮ ಮುಂದುವರಿಸಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪಳ್ಳತ್ತಡ್ಕ ಎಯುಪಿ ಶಾಲೆಯ ಅಧ್ಯಾಪಕನಾಗಿರುವ ಗುರುಪ್ರಸಾದ್ ನೀಡಿದ ಅರ್ಜಿ ಪರಿಗಣಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಎಇಒರ ಅನುಮತಿಯೊಂದಿಗೆ ಪ್ರಶ್ನಾವಳಿ ತಯಾರಿಸಲಾಗಿದೆಯೆಂದು ಚರಿತ್ರೆಪರವಾದ ವಿಷಯದಲ್ಲಿ ಪ್ರಶ್ನೆ ಒಳಪಡಿಸಿರುವುದಾಗಿಯೂ ಅಧ್ಯಾಪಕ ಅರ್ಜಿಯಲ್ಲಿ ತಿಳಿಸಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಬಳೆ, ಕಾಸರಗೋಡು ಉಪಜಿಲ್ಲೆಗಳ ಶಾಲೆಗಳಿಗೆ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದ ನೀಡಿದ್ದ ಎಲ್.ಪಿ. ವಿಭಾಗ ಸ್ವಾತಂತ್ರ್ಯ ದಿನ ರಸಪ್ರಶ್ನೆ ಸ್ಪರ್ಧೆಯ ಪ್ರಶ್ನಾವಳಿ ವಿವಾದಕ್ಕೆ ಹೇತುವಾಗಿತ್ತು.






