ಸೀತಾಂಗೋಳಿ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ.
ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯಲ್ಲಿ ತೆರಳಬೇ ಕಾಗಿದೆ. ಇದೀಗ ಸುರಿಯುತ್ತಿರುವ ಮಳೆಯ ನೀರು ರಸ್ತೆಯಲ್ಲಿ ತುಂಬಿ ಕೊಂಡಿದ್ದು ಕೆಸರುಗದ್ದೆಯಂತಾಗಿದೆ. ಇದರಿಂದಾಗಿ ಜನರಿಗೆ ನಡೆದು ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿಯುಂಟಾಗಿದೆ. ಈ ಭಾಗದವರಿಗೆ ತುರ್ತಾಗಿ ಎಲ್ಲಿಗಾದರೂ ತೆರಳಬೇಕೆಂದಾದರೆ ಆಟೋ ರಿಕ್ಷಾ ಅಥವಾ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಚಾಲಕರು ಹಿಂಜರಿಯುತ್ತಿದ್ದಾರೆ. ಈ ರಸ್ತೆ ಮೂಲಕ ಕೆಂಪು ಕಲ್ಲಿನ ಲಾರಿಗಳು, ಮರ ಸಾಗಾಟದ ಲಾರಿಗಳು ನಿರಂತರ ಸಂಚರಿಸುತ್ತಿದ್ದು ಇದುವೇ ರಸ್ತೆ ಇಷ್ಟು ಹದಗೆಡಲು ಕಾರಣವಾಗಿದೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಯಾರೂ ಮುಂದಾಗುತ್ತಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಬದಿಯಡ್ಕ ಪಂಚಾಯತ್ನ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ಈ ರಸ್ತೆಯಿದೆ. ಈ ರಸ್ತೆಗೆ ಡಾಮರೀಕರಣ ನಡೆಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ. ಪಂಚಾಯತ್ ಅಧಿಕಾರಿಗಳು, ಜನ ಪ್ರತಿನಿಧಿಗಳು ಅದಕ್ಕೆ ಆಸಕ್ತಿ ವಹಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಪಂಚಾಯತ್ನ ಮುಂದೆ ಚಳವಳಿ ನಡೆಸಬೇಕಾಗಿ ಬರಲಿದೆಯೆಂದು ಇಲ್ಲಿನ ನಾಗರಿಕರು ತಿಳಿಸುತ್ತಿದ್ದಾರೆ.






