ನೂರಾರು ಮಂದಿ ಆಶ್ರಯಿಸುವ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡು: ನಾಗರಿಕರಿಗೆ ಸಂಚಾರ ಸಮಸ್ಯೆ

ಸೀತಾಂಗೋಳಿ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ.

ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯಲ್ಲಿ ತೆರಳಬೇ ಕಾಗಿದೆ. ಇದೀಗ ಸುರಿಯುತ್ತಿರುವ ಮಳೆಯ ನೀರು ರಸ್ತೆಯಲ್ಲಿ ತುಂಬಿ ಕೊಂಡಿದ್ದು ಕೆಸರುಗದ್ದೆಯಂತಾಗಿದೆ. ಇದರಿಂದಾಗಿ ಜನರಿಗೆ ನಡೆದು ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿಯುಂಟಾಗಿದೆ. ಈ ಭಾಗದವರಿಗೆ ತುರ್ತಾಗಿ ಎಲ್ಲಿಗಾದರೂ ತೆರಳಬೇಕೆಂದಾದರೆ ಆಟೋ ರಿಕ್ಷಾ ಅಥವಾ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಚಾಲಕರು ಹಿಂಜರಿಯುತ್ತಿದ್ದಾರೆ. ಈ ರಸ್ತೆ ಮೂಲಕ ಕೆಂಪು ಕಲ್ಲಿನ ಲಾರಿಗಳು, ಮರ ಸಾಗಾಟದ ಲಾರಿಗಳು ನಿರಂತರ ಸಂಚರಿಸುತ್ತಿದ್ದು ಇದುವೇ ರಸ್ತೆ ಇಷ್ಟು ಹದಗೆಡಲು ಕಾರಣವಾಗಿದೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಯಾರೂ ಮುಂದಾಗುತ್ತಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.

ಬದಿಯಡ್ಕ ಪಂಚಾಯತ್‌ನ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ಈ  ರಸ್ತೆಯಿದೆ. ಈ ರಸ್ತೆಗೆ ಡಾಮರೀಕರಣ ನಡೆಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ. ಪಂಚಾಯತ್ ಅಧಿಕಾರಿಗಳು, ಜನ ಪ್ರತಿನಿಧಿಗಳು ಅದಕ್ಕೆ ಆಸಕ್ತಿ ವಹಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಪಂಚಾಯತ್‌ನ ಮುಂದೆ ಚಳವಳಿ ನಡೆಸಬೇಕಾಗಿ  ಬರಲಿದೆಯೆಂದು ಇಲ್ಲಿನ ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page