ಕಣಿಪುರ ಕ್ಷೇತ್ರ ಬ್ರಹ್ಮಕಲಶ: ಕುಂಬಳೆಯಲ್ಲಿ ‘ಪಿಲಿರಂಗ್’ ಸಂಭ್ರಮಕ್ಕೆ ಇಂದು ಚಾಲನೆ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಭ್ರಮದಂಗವಾಗಿ ಜಿ.ಕೆ. ಟೈಗರ್ಸ್ ಕುಂಬಳೆ ಆಯೋಜಿಸಿರುವ ‘ಪಿಲಿರಂಗ್’ ಹುಲಿ ಕುಣಿತದ ಅಭಿಯಾನಕ್ಕೆ ಇಂದು ನಾಂದಿಯಾಗಲಿದೆ.
ಇಂದು ರಾತ್ರಿ ೭.೩೦ಕ್ಕೆ ಜಯಮಾರುತಿ ವ್ಯಾಯಾಮಶಾಲೆಯಲ್ಲಿ ಊದು ಪೂಜೆ ನಡೆದು ಆರಂಭವಾಗುವ ಹುಲಿ ಕುಣಿತದ ವೈಭವದಲ್ಲಿ ೫೦ರಷ್ಟು ನುರಿತ, ಉದಯೋನ್ಮುಖ ಹುಲಿವೇಷಧಾರಿಗಳು ಪಾಲ್ಗೊಳ್ಳುವರು. ನಾಳೆ, ೧೬ರಂದು ಪೇಟೆ ಪರಿಸರದ ಆಯ್ದ ಕೇಂದ್ರ, ಮನೆಗಳಲ್ಲಿ ಹುಲಿ ಕುಣಿತ ಪ್ರದರ್ಶನದೊಂದಿಗೆ ಬ್ರಹ್ಮಕಲಶ ಪ್ರಚಾರ ನಡೆಯಲಿದೆ. ೧೬ರಂದು ಸಂಜೆ ಕೃಷ್ಣನಗರದಿಂದ ಆಗಮಿಸುವ ಬೃಹತ್ ಹೊರೆ ಕಾಣಿಕೆ ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಆಗಮಿಸುವ ಹುಲಿಗಳು ರಾತ್ರಿ ಬ್ರಹ್ಮಕಲಶ ವೇದಿಕೆಯಲ್ಲಿ ಪ್ರಧಾನ ಪ್ರದರ್ಶನ ನೀಡಲಿದೆ.
ತುಳುನಾಡಿನ ನೆಲಮೂಲದ ಜನಪದ ಸಂಭ್ರಮವನ್ನು ಕಾಪಾಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಕುಂಬಳೆ ಕ್ಷೇತ್ರ ಬ್ರಹ್ಮಕಲಶದಲ್ಲಿ ಪಿಲಿರಂಗ್ ನಡೆಸುತ್ತಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.