ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಕರ್ನಾಟಕ ನಿವಾಸಿಯಾದ ಯುವಕ ನಿಗೂಢರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಕರ್ನಾಟಕದ ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ದಿ| ಪಿರಾ ನಾಯ್ಕ್ರ ಪುತ್ರ ರಮೇಶ (38) ಕೊಲೆಗೀಡಾದ ವ್ಯಕ್ತಿ. ಅಂಗಡಿಪದವಿನಲ್ಲಿರುವ ಹಳೆಯ ಎರಡಂತಸ್ತಿನ ಮನೆಯೊಳಗೆ ನಿನ್ನೆ ರಾತ್ರಿ 7 ಗಂಟೆ ವೇಳೆ ರಮೇಶ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಮನೆಯಲ್ಲಿ ಬಾಡಿಗೆಗೆ ವಾಸಿಸುವ ಕೃಷ್ಣಪ್ಪ ಎಂಬವರು ಮೃತದೇಹವನ್ನು ಮೊದಲು ಕಂಡಿದ್ದಾರೆ. ಬಳಿಕ ಈ ವಿಷಯವನ್ನು ಮನೆಯ ಮಾಲಕನಾದ ನರಸಿಂಹ ಮೂರ್ತಿಗೆ ತಿಳಿಸಲಾಯಿತು. ಅವರು ಮನೆಗೆ ಭೇಟಿ ನೀಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಎಎಸ್ಪಿ ಅಶೋಕ್ ಅಚ್ಯುತ್, ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಎನ್.ವಿ. ವಿಷ್ಣು ಪ್ರಸಾದ್ ಎಂಬಿವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಬಳಿಕ ಅಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದ್ದು, ಇಂದು ಬೆಳಿಗ್ಗೆ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕುರಿತು ಹೆಚ್ಚಿನ ಮಾಹಿತಿ ಲಭಿಸಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ರ ತಲೆ ಪೂರ್ಣವಾಗಿ ಛಿದ್ರಗೊಂಡ ಸ್ಥಿತಿಯಲ್ಲಿತ್ತು. ಶರೀರದ ಹಲವು ಭಾಗಗಳಲ್ಲಿ ಗಾಯಗಳು ಕಂಡು ಬಂದಿದೆ. ಮನೆಯ ಅಡುಗೆಕೋಣೆ ಯಲ್ಲಿರುವ ಅರೆಯುವ ಕಲ್ಲಿನಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ. ಆದ್ದರಿಂದ ಇದೊಂದು ಕೊಲೆ ಕೃತ್ಯವಾಗಿದೆಯೆಂದು ಪ್ರಾಥಮಿಕ ತನಿಖಯಲ್ಲಿ ಸ್ಪಷ್ಟಗೊಂಡಿದೆ. ರಮೇಶ ಹಲವು ವರ್ಷಗಳಿಂದ ಹೊಸಂಗಡಿ ಭಾಗದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲೇ ವಾಸಿಸುತ್ತಿದ್ದರು.
ರಮೇಶರ ಮೃತದೇಹ ಪತ್ತೆಯಾದ ಮನೆಯಲ್ಲಿ ಒಟ್ಟು ೮ರಷ್ಟು ಮಂದಿ ವಾಸಿಸುತ್ತಿದ್ದು, ಅವರು ನಿನ್ನೆ ಬೆಳಿಗ್ಗೆ ವಿವಿಧೆಡೆಗೆ ಕೆಲಸಕ್ಕೆ ತೆರಳಿದ್ದರು. ಇವರು ನಿನ್ನೆ ರಾತ್ರಿ ಮರಳಿ ಅಲ್ಲಿಗೆ ತಲುಪಿದಾಗಲೇ ರಮೇಶರ ಮೃತದೇಹ ಕಂಡುಬಂದಿದೆ. ರಮೇಶರನ್ನು ಈ ಮನೆಗೆ ಕರೆದುಕೊಂಡು ಬಂದ ವ್ಯಕ್ತಿ ಪ್ರಸ್ತುತ ನಾಪತ್ತೆಯಾಗಿದ್ದಾನೆ. ಈತ ಕೂಡಾ ಕರ್ನಾಟಕ ನಿವಾಸಿಯಾಗಿದ್ದಾನೆಂದು ತಿಳಿದುಬಂದಿದೆ. ಒಂದು ತಿಂಗಳ ಹಿಂದೆಯಷ್ಟೇ ರಮೇಶ ಊರಿಗೆ ತೆರಳಿ ಮರಳಿ ಹೊಸಂಗಡಿಗೆ ಬಂದಿದ್ದರು. ಇದೇ ವೇಳೆ ರಮೇಶರನ್ನು ಪ್ರಸ್ತುತ ತಲೆಮರೆಸಿಕೊಂಡಿರುವ ವ್ಯಕ್ತಿ ಯಾಕಾಗಿ ಈ ಮನೆಗೆ ಕರೆದುಕೊಂಡು ಬಂದಿದ್ದಾನೆಂದು ತಿಳಿದುಬಂದಿಲ್ಲ. ರಮೇಶರ ಸಾವಿನ ಸುದ್ದಿ ತಿಳಿದು ಸಂಬಂಧಿಕರು ಹೊಸಂಗಡಿಗೆ ತಲುಪಿದ್ದಾರೆ.
ಮೃತರು ತಾಯಿ ಗಿರಿಜಮ್ಮ, ಸಹೋದರ-ಸಹೋದರಿಯರಾದ ರಾಜ, ರವಿ, ಆಶಾ ಭಾ ,ಲಕ್ಷ್ಮೀಭಾ, ನಿರ್ಮಲಾಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






