ಮುಳ್ಳೇರಿಯ: ಕೇರಳ ಕರ್ನಾಟಕ ರಾಜ್ಯಗಳ ಪ್ರಧಾನ ನಗರ ಹಾಗೂ ಪ್ರವಾಸೋಧ್ಯಮ ವಲಯವನ್ನು ಜೋಡಿಸುವ ಚೆರ್ಕಳ- ಜಾಲ್ಸೂರು ರಾಜ್ಯ ಹೆದ್ದಾರಿ ೫೫ರಲ್ಲಿ ವಾಹನ ದಟ್ಟಣೆ ಹಾಗೂ ದುರಸ್ತಿ ಕೆಲಸಗಳ ಕೊರತೆಯಿಂದಾಗಿ ಹೆದ್ದಾರಿ ಶೋಚನೀಯಾವಸ್ಥೆಗೆ ತಲುಪಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಅಂತಾರಾಜ್ಯ ಪ್ರಾಮುಖ್ಯತೆ ಇರುವ ಈ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆದು ಹಲವು ಕಾಲ ಕಳೆದಿರುವುದಾಗಿಯೂ ದೂರಲಾಗಿದೆ. ಕೇರಳ – ಕರ್ನಾಟಕ ರಾಜ್ಯಗಳ ಪ್ರಧಾನ ನಗರಗಳನ್ನು ಹಾಗೂ ಪ್ರವಾಸೋಧ್ಯಮ ವಲಯಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನದಟ್ಟಣೆ ಹಾಗೂ ಸರಕು ವಾಹನಗಳ ನಿರಂತರ ಸಂಚಾರದಿಂದಾಗಿ ಪಡ್ಯತ್ತಡ್ಕದಿಂದ ಪಂಜಿಕಲ್ ವರೆಗೆ ಆಂಶಿಕವಾಗಿ ಹಾನಿಗೊಂಡಿದೆ.
ಮುಳ್ಳೇರಿಯದಿಂದ ಆರಂಭಿಸಿ ಪಂಜಿಕಲ್ಲುವರೆಗೆ ತಿರುವುಗಳು ಹೆಚ್ಚಿದ್ದು, ಇದರಿಂದಾಗಿ ಹೆಚ್ಚಿನ ಸಮಯಗಳಲ್ಲಿ ಅಪಘಾತಗಳು, ಮರಣಗಳು ಉಂಟಾಗುತ್ತಿದೆ. ಕಾಸರಗೋಡಿನೊಂದಿಗೆ ಸುಳ್ಯ, ಮಡಿಕೇರಿ, ಮೈಸೂರು, ಬೆಂಗಳೂರು ಮೊದಲಾದ ಬೃಹತ್ ನಗರಗಳು ಹಾಗೂ ಕರ್ನಾಟಕದ ಇತರ ಪ್ರಧಾನ ಕೇಂದ್ರಗಳಿಗೆ ಸುಲಭದಲ್ಲಿ ತಲುಪಬಹುದಾದ ಈ ರಸ್ತೆ ಈಗ ಶೋಚನೀಯಗೊಂಡಿದೆ. ರಾಣಿಪುರಂ, ಬೇಕಲ ಮೊದಲಾದ ರಾಜ್ಯದ ಪ್ರವಾಸೋದಮ ವಲಯಗಳಿಗೆ ಕರ್ನಾಟಕದಿಂದಲೂ ಸುಲಭದಲ್ಲಿ ತಲುಪಲು ಈ ರಸ್ತೆ ಸಹಾಯಕವಾಗಿದೆ. ಕಾಸರಗೋಡಿನಿಂದ ಬೆಂಗಳೂರಿಗೆ, ಮೈಸೂರಿಗೆ, ಕರ್ನಾಟಕದ ವಿವಿಧ ಪ್ರದೇಶಗಳಿಗಿರುವ ಸರಕು ಸಾರಿಗೆ ಹಾಗೂ ಅಲ್ಲಿಂದ ರಾಜ್ಯಕ್ಕೆ ತರುವುದಕ್ಕೆ ಈ ರಸ್ತೆ ಉಪಯುಕ್ತವಾಗಿದೆ.
ಚೆರ್ಕಳದಿಂದ ಪಂಜಿಕಲ್ ವರೆಗಿರುವ ವಿವಿಧ ಪ್ರದೇಶಗಳ ಜನರಿಗೆ ಹಾಗೂ ಒಳ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನಿತ್ಯವೂ ಆಶ್ರಯಿಸಬಹುದಾದ ಈ ರಸ್ತೆ ಹಾನಿಗೊಂಡಿರುವ ಕಾರಣ ವಿದ್ಯಾರ್ಥಿಗಳು ಹಾಗೂ ರೋಗಿಗಳು ಅತ್ಯಂತ ಸಂಕಷ್ಟಪಡುತ್ತಿದ್ದಾರೆ. ಅಗತ್ಯ ಸ್ಥಳಗಳಲ್ಲಿ ಸೂಚನಾ ಬೋರ್ಡ್ಗಳು, ತಡೆ ಬೇಲಿಗಳು ಎಂಬಿವುಗಳನ್ನು ಸ್ಥಾಪಿಸಿ ಈ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮಾಡಬೇಕೆಂದು ಪ್ರಯಾಣಿಕರು ಹಾಗೂ ನಾಗರಿಕರು ಆಗ್ರಹಿಸುತ್ತಿದ್ದಾರೆ.







