ಬಸ್‌ನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲೆತ್ನ: ತಮಿಳುನಾಡು ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ೩ ಪವನ್ ಚಿನ್ನದ ಸರವನ್ನು ಕಳವುಗೈಯ್ಯಲು ಪ್ರಯತ್ನಿಸಿದ ತಮಿಳು ನಾಡು ನಿವಾಸಿ ಮಹಿಳೆ ಸೆರೆಗೀಡಾಗಿ ದ್ದಾಳೆ. ಮಧುರೈ ನಿವಾಸಿ ಮುತ್ತಾತ (40) ಎಂಬಾಕೆಯನ್ನು  ಕಳವು ಯತ್ನ ವೇಳೆ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ  ಘಟನೆ ನಡೆದಿದೆ. ಬಂಗ್ರಮಂಜೇಶ್ವರ ನಿವಾಸಿ ಪ್ರೇಮ 77) ಎಂಬವರ  ಕುತ್ತಿಗೆಯಿಂದ ೩ ಪವನ್‌ನ ಚಿನ್ನದ ಸರವನ್ನು  ಮುತ್ತಾತ ಕಸಿಯಲು ಪ್ರಯತ್ನಿಸಿದ್ದಳು. 

ಸಂಬಂಧಿಕರ ಮದುವೆ  ಅತಿಥಿ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊಸಂಗಡಿಗೆ ಪ್ರೇಮ ಬರುತ್ತಿದ್ದರು. ಬಸ್ ಇಳಿಯುತ್ತಿದ್ದಂತೆ ಅವರ ಹಿಂಬದಿಯಲ್ಲಿ ಚೂಡಿದಾರ ಧರಿಸಿದ ಮಹಿಳೆ  ಚಿನ್ನದ ಸರವನ್ನು ಎಗರಿಸಲು ಯತ್ನಿಸಿದ್ದಾಳೆ.  ಇದನ್ನು ಕಂಡ ಇನ್ನೋರ್ವೆ ಯುವತಿ  ಪ್ರೇಮರಿಗೆ  ವಿಷಯ ತಿಳಿಸಿದ್ದರು.  ಆವಾಗಲೇ ಸರ ಕಸಿಯಲು ನಡೆಸಿದ ಯತ್ನ ಗಮನಕ್ಕೆ ಬಂದಿದೆ.  ವಿಷಯ ತಿಳಿದ ಪ್ರಯಾಣಿಕರ ಸಹಿತ ಇತರರು ಮಹಿಳೆಯನ್ನು ತಡೆದು ನಿಲ್ಲಿಸಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮಹಿಳೆ ವಿರುದ್ಧ ಹಲವು ಕಳವು ಪ್ರಕರಣಗಳು  ದಾಖಲಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಸೆರೆಗೀಡಾದ ಮಹಿಳೆಯನ್ನು ಪೊಲೀಸರು ತನಿಖೆಗೊಳಪಡಿಸುತ್ತಿದ್ದಾರೆ.

You cannot copy contents of this page