ಕುಂಬಳೆ: ಮಾಧ್ಯಮ ಕಾರ್ಯಕರ್ತರೆಂದು ತಿಳಿಸಿ ಸರಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಅನಧಿಕೃತವಾಗಿ ಫೋಟೋ, ವೀಡಿಯೋ ಚಿತ್ರೀಕರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಪ್ರೆಸ್ ಫಾರಂ ಮುಖ್ಯಮಂತ್ರಿ, ಗೃಹ ಸಚಿವ, ಡಿಜಿಪಿ ಎಂಬಿವರಿಗೆ ಮನವಿ ಸಲ್ಲಿಸಿದೆ.
ಮಂಜೇಶ್ವರ, ಉಪ್ಪಳ, ಕುಂಬಳೆ ಪ್ರದೇಶಗಳಲ್ಲಿ ಅಂಗೀಕಾರವಿಲ್ಲದೆ ಮಾಧ್ಯಮ ಕಾರ್ಯಕರ್ತರೆಂದು ಹೇಳಿಕೊಂಡು ಕಾರ್ಯಾಚರಿಸು ವವರ ಸಂಖ್ಯೆ ಹೆಚ್ಚುತ್ತಿದೆ. ಸಚಿವರು, ಶಾಸಕರು ಸಹಿತ ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ನಕಲಿ ಗುರುತುಚೀಟಿಗಳನ್ನು ಉಪಯೋಗಿಸಿ ವೇದಿಕೆ ಸಹಿತ ಕಾರ್ಯಕ್ರಮ ಪ್ರದೇಶಗಳಿಗೆ ನುಗ್ಗಿ ಫೊಟೋ, ವೀಡಿಯೋ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ಇದು ಯತಾರ್ಥ ಮಾಧ್ಯಮ ಕಾರ್ಯಕರ್ತರ ಕೆಲಸ ನಿರ್ವಹಣೆಗೆ ಸಮಸ್ಯೆಯಾಗಿ ಪರಿಣಮಿಸಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ವಾಹನಗಳಲ್ಲಿ ಅನಧಿಕೃತವಾಗಿ ಪ್ರೆಸ್ ಎಂಬ ಸ್ಟಿಕ್ಕರ್ ಅಂಟಿಸಿ ಸಂಚರಿಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಸಂಸ್ಥೆಗಳ, ಪ್ರೆಸ್ ಕ್ಲಬ್ಗಳ ಅಥವಾ ಪ್ರೆಸ್ ಫಾರಂಗಳ ಅಂಗೀಕಾರವಿಲ್ಲದೆ ಮೀಡಿಯಾ ಎಂಬ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಸಂಗ್ರಹ ಮತ್ತಿತರ ವಂಚನೆಗಳನ್ನು ನಡೆಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಾಧ್ಯಮ ಚಟುವಟಿಕೆಗೆ ಯಾವುದೇ ಸಂಬಂಧವಿಲ್ಲದವರು ಸಾಮಾಜಿಕ ಮಾಧ್ಯಮಗಳ ಹೆಸರಲ್ಲಿ ಮಾಧ್ಯಮ ಕಾರ್ಯಕರ್ತರೆಂದು ಹೇಳಿಕೊಂಡು ಕಾರ್ಯಾಚರಿಸುವವರ ಸಂಖ್ಯೆ ಹೆಚ್ಚುತ್ತಿದೆಯೆಂದು ಮನವಿಯಲ್ಲಿ ತಿಳಿಸಲಾಗಿದೆ. ಮಂಜೇಶ್ವರ ಪ್ರದೇಶದಲ್ಲಿ ಪ್ರೆಸ್ ಸ್ಟಿಕ್ಕರ್ ಬಳಸಿ ಮಾದಕವಸ್ತು, ಹೊಯ್ಗೆ ಸಾಗಾಟ ಸಹಿತ ಕಾನೂನುವಿರುದ್ಧ ಚಟುವಟಿಕೆಗಳಿಗೆ ಬೆಂಗಾವಲಾಗಿ ಕಾರ್ಯಾಚರಿಸುತ್ತಿರುವ ಬಗ್ಗೆ ಈ ಹಿಂದೆಯೇ ದೂರು ಕೇಳಿಬಂದಿತ್ತು. ಈ ಬಗ್ಗೆ ಪ್ರೆಸ್ ಫಾರಂ ಜಿಲ್ಲಾ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲ. ಸರಕಾರಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಂಗೀಕೃತ ಗುರುತುಚೀಟಿ ತಪಾಸಣೆ ನಡೆಸಬೇಕು. ಪ್ರವೇಶ ನಿಯಂತ್ರಣ ಏರ್ಪಡಿಸಬೇಕು, ನಕಲಿ ಮಾಧ್ಯಮ ಕಾರ್ಯಕರ್ತರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು, ಯತಾರ್ಥ ಮಾಧ್ಯಮ ಕಾರ್ಯಕರ್ತರ ಸುರಕ್ಷತೆ, ಉದ್ಯೋಗ ಸ್ವಾತಂತ್ರ್ಯ ಖಚಿತಪಡಿಸಲು ರಾಜ್ಯ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಬೇಕು, ಮಾಧ್ಯಮ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆಯೊಡ್ಡಿ ಹಣ ಲಪಟಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿರಿಸಲಾಗಿದೆ. ಈ ವಿಷಯದ ಕುರಿತು ಮುಖ್ಯಮಂತ್ರಿಯನ್ನು ನೇರವಾಗಿ ಭೇಟಿಯಾಗಿ ವಿವರಿಸಲಾಗುವುದು. ಆಪರೇಶನ್ ತೂಫಾನ್ ಮಾದರಿಯಲ್ಲಿ ನಕಲಿ ಮಾಧ್ಯಮ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಪ್ರೆಸ್ ಫಾರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ, ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಒತ್ತಾಯಿಸಿದ್ದಾರೆ.





