ಸಿಪಿಎಂ ವಿಸ್ತೃತ ಸಮಿತಿ ಸಭೆ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ತಂತ್ರ -ಎ.ಪಿ. ಅಬ್ದುಲ್ಲಕುಟ್ಟಿ

ಹೊಸದುರ್ಗ: ಕಮ್ಯೂನಿಸ್ಟ್ ಪಕ್ಷದ ವಿಸ್ತೃತ ರಾಜ್ಯ ಸಮಿತಿ ಸಭೆ ಹಾಗೂ ಚುನಾವಣಾ ಫಲಿತಾಂಶದ ಪರಾಮ ರ್ಶೆಯು ಕೇವಲ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ತಂತ್ರ ಮಾತ್ರವಾಗಿದೆ ಯೆಂದು ಬಿಜೆಪಿ ಮುಖಂಡ ಎ.ಪಿ. ಅಬ್ದುಲ್ಲಕುಟ್ಟಿ ಆರೋಪಿಸಿದರು. ವಿರೋಧ ಪಕ್ಷದ ನಾಯಕ ಸ್ಥಾನದಿಂದ ಪಿಣರಾಯಿ ವಿಜಯನ್‌ರನ್ನು ಹಾಗೂ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ಎಂ.ವಿ. ಗೋವಿಂದನ್ ರನ್ನು ಬದಲಾಯಿಸಲು ಸಿಪಿಎಂ ಮುಂದಾಗದಿರುವುದು ಪಕ್ಷವು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಚೀಮೇನಿಯ ಟ್ರೀ ವುಡ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ, ಬಿಜೆಪಿ ಜಿಲ್ಲಾ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡುತ್ತಿದ್ದರು.
ಕೇವಲ ಮೂರು ತಿಂಗಳಲ್ಲೇ ವಿ.ಡಿ. ಸತೀಶನ್ ಸರಕಾರದ ವೈಫಲ್ಯ ಸಾಬೀತಾಗಿದ್ದು, ರಾಜ್ಯದಲ್ಲಿ ನಿಜವಾದ ವಿರೋಧ ಪಕ್ಷದ ಪಾತ್ರವನ್ನು ಬಿಜೆಪಿ ನಿರ್ವಹಿಸುತ್ತಿದೆ ಎಂದು ಅಬ್ದುಲ್ಲಕುಟ್ಟಿ ನುಡಿದರು.
ನರೇಂದ್ರ ಮೋದಿ ಸರಕಾರಕ್ಕೆ ಜಾಗತಿಕ ನಾಯಕರ ನಡುವೆ ಲಭಿಸುತ್ತಿರುವ ಮನ್ನಣೆ ಹಾಗೂ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಆಯೋಗದ ವಿರುದ್ಧ ವಿವಿಧ ಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಇತ್ತೀಚಿನ ಪ್ರತಿಭಟನೆಗಳೇ ಇದಕ್ಕೆ ನಿದರ್ಶನ ಎಂದೂ ಅವರು ಬೊಟ್ಟುಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರನ್ನು ಸಮಾರೋಪ ಸಮಾರಂಭದಲ್ಲಿ ಎ.ಪಿ. ಅಬ್ದುಲ್ಲಕುಟ್ಟಿ ಸನ್ಮಾನಿಸಿದರು.
ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಕೆ. ವೇಲಾಯುಧನ್, ಕಣ್ಣೂರು ವಲಯ ಅಧ್ಯಕ್ಷ ಅಡ್ವ. ಕೆ. ಶ್ರೀಕಾಂತ್, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್‌ಚಂದ್ರ ಭಂಡಾರಿ, ರವೀಶ ತಂತ್ರಿ ಕುಂಟಾರು, ಪ್ರಮೀಳಾ ಸಿ. ನಾಯ್ಕ್, ಎ. ವೇಲಾಯುಧನ್, ಕಣ್ಣೂರು ವಲಯ ಸಂಘಟನಾ ಕಾರ್ಯದರ್ಶಿ ಎ.ವಿ. ಶಿಜು, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ, ರಾಜ್ಯ ಕೌನ್ಸಿಲ್ ಸದಸ್ಯ ಅಡ್ವ. ಬಿ. ರವೀಂದ್ರನ್, ರೂಪವಾಣಿ ಭಟ್, ಹರೀಶ್ ನಾರಂಪಾಡಿ ಮಾತನಾಡಿದರು.

You cannot copy contents of this page