ಮಂಜೇಶ್ವರದಲ್ಲಿ ದರ್ಗಾಕ್ಕೆ ನುಗ್ಗಿದ ಕಳ್ಳರು: ಬಾಗಿಲು ಮುರಿದು  ಕಾಣಿಕೆ ಡಬ್ಬಿಯಿಂದ ಹಣ ಕಳವು

ಮಂಜೇಶ್ವರ: ಮಂಜೇಶ್ವರದಲ್ಲಿ ದರ್ಗಾವೊಂದಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಗಳನ್ನು ಕೆಡವಿ ಹಣ ದೋಚಿದ್ದಾರೆ.  ಮಂಜೇಶ್ವರ ಕಜೆ ರಸ್ತೆಯಲ್ಲಿರುವ ಕಡವು ಮುಖಾಂನಿಂದ ಕಳವು ನಡೆದಿದೆ.  ಮುಖಾಂನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಟ್ಟಿಗೆಯಿಂದ ನಿರ್ಮಿಸಿದ್ದ ಕಾಣಿಕೆ ಡಬ್ಬಿಯನ್ನು  ಕೆಡವಿ   ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಅಲ್ಲದೆ ದರ್ಗಾದೊಳಗೆ ಇರುವ ಕಾಣಿಕೆ ಡಬ್ಬಿಯನ್ನು ಮುರಿಯಲು ಯತ್ನಿಸಿರುವುದು ಕಂಡುಬಂದಿದೆ. ಟೈಲ್ಸ್ ಅಳವಡಿಸಿ ನಿರ್ಮಿಸಿದ ಕಾಣಿಕೆ ಡಬ್ಬಿಯನ್ನು ಕೆಡವಲಾಗಿದೆ. ಆದರೆ ಇದರಿಂದ ಹಣ ದೋಚಲು ಕಳ್ಳರಿಗೆ ಸಾಧ್ಯವಾಗಲಿಲ್ಲ. ಇಟ್ಟಿಗೆಯಿಂದ ಕಟ್ಟಿದ ಕಾಣಿಕೆ ಡಬ್ಬಿಯಲ್ಲಿ  ಸಾವಿರಾರು ರೂಪಾಯಿ ಇದ್ದಿರಬಹು ದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 

 ಉಪ್ಪಳ ಗೇಟ್‌ನಲ್ಲಿ ವಾಸಿಸುವ ಉಸ್ತಾದ್ ಅಶ್ರಫ್ ನಿನ್ನೆ ರಾತ್ರಿ 9 ಗಂಟೆಗೆ ಮುಖಾಂನ ಬಾಗಿಲು ಮುಚ್ಚಿ ತೆರಳಿದ್ದರು. ಇಂದು ಬೆಳಿಗ್ಗೆ ಅವರು ತಲುಪಿದಾಗ   ಬಾಗಿಲು ಮುರಿದ ಸ್ಥಿತಿಯಲ್ಲಿ ಹಾಗೂ  ಕಾಣಿಕೆ ಡಬ್ಬಿಯನ್ನು ಕೆಡವಿ ಹಣ ದೋಚಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಂಜೇಶ್ವರ ಎಸ್‌ಐ ಅರ್ಜುನ್ ಅರವಿಂದ್ ನೇತೃತ್ವದಲ್ಲಿ ಪೊಲೀಸರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಮುಖಾಂನ ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.  ಇದೇ ವೇಳೆ  ಮಂಜೇಶ್ವರ ಭಾಗದಲ್ಲಿ ಕಳವು ಪ್ರಕರಣ ವ್ಯಾಪಕಗೊಂಡಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಉದ್ಯಾವರದ ಸಾವಿರ ಜಮಾಯತ್ ನಿಂದ ಹಣ ಕಳವು ನಡೆಸಲಾಗಿತ್ತು. ಅಲ್ಲದೆ ಉಪ್ಪಳದಲ್ಲಿ ಅಂಗಡಿಗಳ ಕಳವು ಯತ್ನ ವೂ ನಡೆದಿತ್ತು.

You cannot copy contents of this page