ಕುಂಬಳೆ:? ಮಂಗಳೂರಿನಲ್ಲಿ ನಿನ್ನೆ ನ್ಯಾಯಾಧೀಶರು ಸಂಚರಿಸುತ್ತಿದ್ದ ಕಾರು ಹಾಗೂ ಗಡ್ಸ್ ಅಟೋ ರಿಕ್ಷಾ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪೇರಾಲ್ ನಿವಾಸಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಪೇರಾಲ್ ಪೊಟ್ಟೋರಿಯ ಚಂದ್ರ ಕೆ (70) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮಂಗಳೂರು ಕಲ್ಪನಾ ಸ್ವೀಟ್ಸ್ ಕಂಪೆನಿಯಲ್ಲಿ 48 ವರ್ಷಗಳಿಂದ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರ. ನಿನ್ನೆ ಇವರು ಸಂಚರಿಸುತ್ತಿದ್ದ ಗೂಡ್ಸ್ ಆಟೋ ರಿಕ್ಷಾ ಹಾಗೂ ಕಾರು ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿನ್ನೆ ಬೆಳಿಗ್ಗೆ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕರಂಗಲ್ಪಾಡಿಯಲ್ಲಿ ಅಪಘಾತ ಉಂಟಾಗಿತ್ತು. ಅಪಘಾತದ ಆಘಾತದಿಂದ ಗೂಡ್ಸ್ ಆಟೋ ರಿಕ್ಷಾ ಮಗುಚಿ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಚಂದ್ರರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಇಂದು ಮಧ್ಯಾಹ್ನ ಪೇರಾಲ್ ಪೊಟ್ಟೋರಿಯ ಮನೆಗೆ ತಲುಪಿಸಿ ಬಳಿಕ ಕುಂಟಂಗೇರಡ್ಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು. ಮೃತರು ಪತ್ನಿ ಶಂಕರಿ, ಮಕ್ಕಳಾದ ಶೀತಲ್, ಸರಿತ, ಅಳಿಯಂದಿರಾದ ಚಂದ್ರಹಾಸ, ದಿನೇಶ್, ಸಹೋದರಿಯರಾದ ಸುಶೀಲ, ಸುರೇಖ, ಶೋಭ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







