ಬದಿಯಡ್ಕ: ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂದಣಿ ಕಂಡುಬಂದಿರುವ ಪೇಟೆಗಳಲ್ಲೊಂದಾದ ಬದಿಯಡ್ಕದಲ್ಲಿ ಅಗತ್ಯದ ಬಸ್ ನಿಲ್ದಾಣವಿಲ್ಲದಿರು ವುದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ದಿನಂಪ್ರತಿ ಹಲವಾರು ಖಾಸಗಿ ಬಸ್ಗಳು, ಕೆಎಸ್ಆರ್ಟಿಸಿ ಬಸ್ಗಳು ಬದಿಯಡ್ಕ ಮೂಲಕ ಸಂಚರಿಸುತ್ತಿವೆ. ಇದೀಗಿನ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶ ಕಡಿಮೆಯಿದ್ದು, ಇದು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕುಂಬಳೆ-ಬದಿಯಡ್ಕ-ಮುಳ್ಳೇರಿಯ- ಸುಳ್ಯ, ಚೆರ್ಕಳ-ಕಲ್ಲಡ್ಕ-ಪುತ್ತೂರು ಎಂಬೀ ಪ್ರಧಾನ ಅಂತಾರಾಜ್ಯ ರಸೆಗಳು ಹಾದುಹೋಗುವ ಪ್ರದೇಶವಾಗಿದೆ ಬದಿಯಡ್ಕ. ಕಾಸರಗೋಡು ಜಿಲ್ಲೆಯಿಂದ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಬದಿಯಡ್ಕ ಮೂಲಕ ದಿನಂಪ್ರತಿ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಉಕ್ಕಿನಡ್ಕದಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜಿಗೆ ತಲುಪಲು ಬದಿಯಡ್ಕ ಮೂಲಕವೇ ಸಂಚರಿಸಬೇಕಾಗುತ್ತಿದೆ. ಆದ್ದರಿಂದ ಬದಿಯಡ್ಕ ಪೇಟೆಯಲ್ಲಿ ನಿತ್ಯ ಭಾರೀ ಜನಸಂದಣಿ ಕಂಡುಬರುತ್ತಿದೆ. ಇದಕ್ಕೆ ಹೊಂದಿಕೊಂಡು ಸುಸಜ್ಜಿತ ಬಸ್ ನಿಲ್ದಾಣ ಇಲ್ಲಿ ನಿರ್ಮಾಣವಾಗಿಲ್ಲ. ಬದಿಯಡ್ಕ ಪೇಟೆಯಲ್ಲಿ ಈ ಹಿಂದೆ ಇದ್ದ ಸುಮಾರು 40 ವರ್ಷಗಳ ಹಳಮೆಯ ಬಸ್ ನಿಲ್ದಾಣವನ್ನು ರಸ್ತೆ ಅಭಿವೃದ್ಧಿಯ ಹೆಸರಲ್ಲಿ ಮುರಿದು ತೆಗೆಯಲಾಗಿದೆ. ಇದರಿಂದ ಆ ಕಟ್ಟಡದಲ್ಲಿದ್ದ ಶೌಚಾಲಯವು ಇಲ್ಲದಾಯಿತು. ಇಲ್ಲಿ ಅತ್ಯಾಧುನಿಕ ರೀತಿಯ ಬಸ್ ನಿಲ್ದಾಣ ನಿರ್ಮಿಸುವು ದಾಗಿ ಅಧಿಕಾರಿಗಳು ಎರಡು ದಶಕಗ ಳಿಂದ ಹೇಳುತ್ತಿದ್ದರೂ ಅದಕ್ಕೆ ಬೇಕಾದ ಹಣ ಮಂಜೂರುಗೊಳ್ಳುತ್ತಿಲ್ಲ. ಇದರಿಂದ ಸುಸಜ್ಜಿತ ಬಸ್ ನಿಲ್ದಾಣವೆಂಬ ಬೇಡಿಕೆ ಈಡೇರುತ್ತಿಲ್ಲ. ಬದಿಯಡ್ಕದಂತಹ ಪ್ರಧಾನ ಅಂತಾರಾಜ್ಯ ಜಂಕ್ಷನ್ನಲ್ಲಿ ಅತ್ಯು ತ್ತಮ ಬಸ್ ನಿಲ್ದಾಣ ನಿರ್ಮಾಣವಾಗ ಬೇಕಾದರೆ ಪಂಚಾಯತ್ನ ಫಂಡ್ ಮಾತ್ರ ಸಾಕಾಗದು. ಅದಕ್ಕೆ ಸಂಸದ, ಶಾಸಕರ ಫಂಡ್ ಕೂಡಾ ಅಗತ್ಯವಿದೆ. ಕೇಂದ್ರ-ರಾಜ್ಯ ಸರಕಾರಿ ಮಟ್ಟದಲ್ಲಿ ಇದಕ್ಕೆ ಪ್ರಯತ್ನ ನಡೆಯಬೇಕು. ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಏಜೆನ್ಸಿಗಳ ಮೂಲಕವಾ ದರೂ ಇಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಸ್ಥಳ ಕಂಡುಕೊಳ್ಳುವುದು ಪಂಚಾಯತ್ಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಪಂಚಾಯತ್ ಈಗ 15 ಲಕ್ಷ ರೂಪಾಯಿ ಮೊತ್ತದಲ್ಲಿ ಶೌಚಾಲಯ ಒಳಗೊಂಡ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಉದ್ದೇಶಿಸಿದೆ. ಆದರೆ ಬಸ್ ನಿಲ್ದಾಣದ ವಿಷಯದಲ್ಲಿ ಪಂಚಾಯತ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ. ಇದು ಕೋಟ್ಯಂತರ ರೂಪಾಯಿ ಖರ್ಚು ತಗಲುವ ಯೋಜನೆಯಾಗಿದ್ದು, ಇದಕ್ಕಾಗಿ ಸಂಬಂಧಪಟ್ಟವರನ್ನು ಪಂಚಾಯತ್ ಆಡಳಿತ ಸಮಿತಿ ಸಂಪರ್ಕಿಸುತ್ತಿದೆ.






