ಕಾಯರ್‌ಕಟ್ಟೆ ಶಾಲೆಯಲ್ಲಿ ಡಿಜಿಟಲ್ ಸ್ಕ್ವೇರ್ ಉದ್ಘಾಟನೆ

ಪೈವಳಿಕೆ: ಕಾಯರ್‌ಕಟ್ಟೆ ಜಿ.ಎಚ್.ಎಸ್.ಎಸ್. ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ಡಿಜಿಟಲ್ ಸ್ಕ್ವೇರ್‌ನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಉದ್ಘಾಟಿಸಿ, ಮಾತನಾಡಿ, ಆಧುನಿಕ ತಂತ್ರಜ್ಞಾನದ ಪರಿಚಯವನ್ನು ಶಾಲಾ ಹಂತದಲ್ಲೇ ಮಕ್ಕಳಿಗೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.
ತಂತ್ರಜ್ಞಾನ ಆಧಾರಿತ ಕಲಿಕೆಯು ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತದೆ. ತಂತ್ರಜ್ಞಾನವನ್ನು ಜ್ಞಾನಾರ್ಜನೆ ಮತ್ತು ಕೌಶಲ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಕಲಿಕೆಯನ್ನು ಸರಳ, ಪರಿಣಾಮಕಾರಿ ಹಾಗೂ ಆಸಕ್ತಿದಾಯಕವಾಗಿಸುವ ಇಂತಹ ವಿನೂತನ ಪ್ರಯತ್ನಗಳು ಶ್ಲಾಘನೀಯವಾಗಿವೆ ಎಂದರು. ಪಿಟಿಎ ಅಧ್ಯಕ್ಷ ಹಮೀದ್ ಬಿ.ಎಂ. ಅಧ್ಯಕ್ಷತೆ ವಹಿಸಿದರು.
ಕಿರಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮೀ ಮಾತನಾಡಿದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿವಿಧ ಯೋಜನಾ ಮಾದರಿಗಳನ್ನು ಅನಾವರಣಗೊಳಿಸಲಾಯಿತು. ಡಿಜಿಟಲ್ ಸ್ಕ್ವೇರ್ ಸಂಯೋಜಕಿ ರಕ್ಷಿತಾ ಸ್ವಾಗತಿಸಿ, ಹಿರಿಯ ಸಹಾಯಕ ಶಿಕ್ಷಕ ಉದಯ ಕೆ. ವಂದಿಸಿದರು.

RELATED NEWS

You cannot copy contents of this page