ಹೊಸಂಗಡಿ ಪರಿಸರದಲ್ಲಿ ಹೆಲ್ಮೆಟ್ ಕಳ್ಳರ ಅಟ್ಟಹಾಸ: ಸಮಸ್ಯೆಗೀಡಾಗುವ ದ್ವಿಚಕ್ರ ಸವಾರರು
ಮಂಜೇಶ್ವರ: ಕಳ್ಳರ ಕಾಟ ಜನಜೀವನದ ತಾಳ ತಪ್ಪಿಸುತ್ತಿದೆ. ವಿವಿಧ ರೀತಿಯಲ್ಲಿ ಹಗಲು ರಾತ್ರಿಯೆನ್ನದೆ ಕಳವು ಕೃತ್ಯ ಈಗ ವ್ಯಾಪಕಗೊಂಡಿದ್ದು, ಜನರು ಸಂPಷ್ಟಕ್ಕೀಡಾಗಿದ್ದಾರೆ. ವಿವಿಧ ರೀತಿಯಲ್ಲಿ ಕಳ್ಳರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಮಂಜೇಶ್ವರ ಪರಿಸರದಲ್ಲಿ ಹೆಲ್ಮೆಟ್ ಕಳ್ಳರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆಂದು ಸ್ಥಳೀಯರು ದೂರುತ್ತಾರೆ. ದ್ವಿಚಕ್ರ ವಾಹನವನ್ನು ನಿಲುಗಡೆಗೊಳಿಸಿ ಬೇರೆಡೆಗೆ ತೆರಳಿ ಬರುವಷ್ಟರಲ್ಲಿ ಹೆಲ್ಮೆಟ್ ಕದ್ದುಕೊಂಡು ಹೋಗಲಾಗಿರುತ್ತದೆ. ನಿನ್ನೆ ಬೆಳಿಗ್ಗೆ ಹೊಸಂಗಡಿಯಲ್ಲಿ ನಿಲ್ಲಿಸಿದ್ದ ಬೈಕ್ ಒಂದರಿಂದ ಹೆಲ್ಮೆಟ್ ಕಳವುಗೈಯ್ಯಲಾಗಿದೆ.
ಇದೇ ರೀತಿ ಹೊಸಂಗಡಿಯಲ್ಲಿ ಈ ಮೊದಲು ಹಲವು ಬಾರಿ ಹಲವರ ಹೆಲ್ಮೆಟ್ ಕಳವು ಗೈದಿರುವುದಾಗಿ ತಿಳಿದು ಬಂದಿದೆ. ಹೆಲ್ಮೆಟ್ ಕಳವು ಬಗ್ಗೆ ಯಾರೂ ದೂರು ನೀಡದಿರುವುದು ಆ ಬಗ್ಗೆ ಪೊಲೀಸರು ಹೆಚ್ಚು ಗಮನ ನೀಡದಿರುವುದು ಹೆಲ್ಮೆಟ್ ಕಳ್ಳರಿಗೆ ವರದಾನವಾಗುತ್ತಿದೆ.
ಉಪ್ಪಳ, ಹೊಸಂಗಡಿ ಪರಿಸರದಲ್ಲಿ ಹೆಲ್ಮೆಟ್ ಕಳ್ಳರು ವ್ಯಾಪಕವಾಗಿ ಬೀಡುಬಿಟ್ಟಿದ್ದು, ಇದನ್ನು ಪತ್ತೆಹಚ್ಚಿ ನಿಯಂತ್ರಿಸಲು ಕ್ರಮವುಂಟಾಗಬೇಕೆಂದು ದ್ವಿಚಕ್ರ ವಾಹನ ಸವಾರರು ಆಗ್ರಹಿಸಿದ್ದಾರೆ.