ಅನಿವಾಸಿ ಕೇರಳೀಯನ ಕೊಲೆಗೆ ಯತ್ನಿಸಿದ ಪ್ರಕರಣ: ಶರಣಾದ ಯೂಟ್ಯೂಬರ್‌ಗೆ ನ್ಯಾಯಾಂಗ ಬಂಧನ

ಕಾಸರಗೋಡು: ಅನಿವಾಸಿ ಕೇರಳೀಯನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ, ಯೂಟ್ಯೂಬರ್ ಕಾಸರಗೋಡು ಅಣಂಗೂರು ಕೊಲ್ಲಂಪಾಡಿ ಹಬೀಬ್ ಮಂಜಿಲ್‌ನ ನಿವಾಸಿ ಖಾದರ್ ಕರಿಪ್ಪೊಡಿ (30) ನಿನ್ನೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ನಂತರ  ಆತನನ್ನು ಪೊಲೀಸರು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಜೂನ್ ೨೭ರಂದುಸಂಜೆ ನಗರದ ಅಣಂಗೂರು ಹೋಟೆಲ್‌ವೊಂದರ ಮುಂದೆ ಅನಿವಾಸಿ ಕೇರಳೀಯನಾದ ಪಳ್ಳಿಕ್ಕೆರೆ ಕಣ್ಣಂಕುಳಂ ದೈನಾಬಿ ಮಂಜಿಲ್‌ನ ಕೆ.ಎಂ. ಅಬ್ದುಲ್ಲ ಅಹದಿ (30) ಎಂಬವರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಖಾದರ್ ಕರಿಪ್ಪೊಡಿ, ರಾಶಿದ್, ಅಶ್ರಫ್ ಎಂಬವರ ವಿರುದ್ಧ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದರು.

ಗಲ್ಫ್‌ನಲ್ಲಿ ನಡೆದ ಹಣದ ವ್ಯವಹಾ ರಕ್ಕೆ ಸಂಬಂಧಿಸಿದ ವಿಷಯವೇ ಅಬ್ದುಲ್ಲ ಅಹದಿಯವರ ಮೇಲೆ ಹಲ್ಲೆ ನಡೆಸಲು ಕಾರಣವಾಗಿದೆ ಎಂದು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಆರೋಪಿಸ ಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು, ಆದರೆ ಆ ವೇಳೆ ಖಾದರ್ ಕರಿಪ್ಪೊಡಿ ತಪ್ಪಿಸಿಕೊಂಡಿದ್ದನು. ನಂತರ ಆತ ನಿರೀಕ್ಷಣಾ ಜಾಮೀನು ಕೋರಿ ಮೊದಲು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ, ಬಳಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಆ ಅರ್ಜಿಗಳನ್ನು ಎರಡು ನ್ಯಾಯಾಲಯಗಳೂ ವಜಾಗೈದು ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ನಂತರ ಆರೋಪಿ ಇದೇ ಬೇಡಿಕೆ ಮುಂದಿರಿಸಿಕೊಂಡು ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದನು. ಸುಪ್ರೀಂಕೋರ್ಟ್ ಕೂಡಾ ಆತನ ಬೇಡಿಕೆಯನ್ನು ಅಂಗೀಕರಿಸಿರಲಿಲ್ಲ. ಇದರಿಂದಾಗಿ ಬೇರೆ ದಾರಿಯಿಲ್ಲದೆ ಆರೋಪಿ ನಿನ್ನೆ ಕಾಸರಗೋಡು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ವಿರುದ್ಧ ಇತರ ಪೊಲೀಸ್ ಠಾಣೆಗಳಲ್ಲೂ ಬೇರೆ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page