ಕಾಸರಗೋಡು: ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾಕಾರಗೊಂಡ ಬಳಿಕ ರಸ್ತೆಯ ಇಕ್ಕಡೆಗಳಲ್ಲಿ ಸಂಚರಿಸಲು ಜನರು ಪಡುವ ಸಂಕಷ್ಟಗಳನ್ನು ಗಣನೆಗೆ ತೆಗೆದು ತುರ್ತು ಪ್ರಾಮುಖ್ಯತೆಯೊಂದಿಗೆ ಹೊಸ ಐದು ಕಾಲುದಾರಿ ಮೇಲ್ಸೇತುವೆಗಳನ್ನು ನಿರ್ಮಿಸಲು ಆರಂಭಿಸಲಾಗಿದೆ. ಸ್ಥಳೀಯರ, ವಿವಿಧ ಸಂಘಟನೆಗಳ, ಶಾಲಾ ಅಧಿಕಾರಿಗಳ ನಿರಂತರ ಮನವಿಗೆ ಸ್ಪಂದಿಸಿ ಶಾಸಕ ಹಾಗೂ ಸಂಸದರ ನೇತೃತ್ವದಲ್ಲಿ ನಡೆಸಿದ ಮಧ್ಯಪ್ರವೇಶ ಯೋಜನೆಗೆ ಅಂಗೀಕಾರ ಲಭ್ಯಗೊಳಿಸಲು ಕಾರಣವಾಗಿದೆ. ಹೆದ್ದಾರಿಯ ಕುನ್ನಿಲ್, ಸಿಪಿಸಿಆರ್‌ಐ, ಅಡ್ಕತ್ತಬೈಲು, ಇಂದಿರಾನಗರ, ನುಳ್ಳಿಪ್ಪಾಡಿಯಲ್ಲಿ ನೂತನವಾಗಿ ಕಾಲುದಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಹೆದ್ದಾರಿಗೆ ಗೋಡೆಕಟ್ಟಿ ಪ್ರದೇಶಗಳು ಇಬ್ಭಾಗವಾದ ಹಿನ್ನೆಲೆಯಲ್ಲಿ ಅತ್ತಿತ್ತ ಸಂಚರಿಸಲು ಸಮಸ್ಯೆ ಉಂಟಾಗುವ ಬಗ್ಗೆ ವ್ಯಾಪಕ ದೂರು ವಿವಿಧೆಡೆಗಳಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗ ಹೊಸ ಮೇಲ್ಸೇತುವೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಶೀಘ್ರವೇ ಅತ್ಯಾಧುನಿಕ ರೀತಿಯ ಕಾಲುದಾರಿ ನಿರ್ಮಿಸಿ ಸಂಚಾರಕ್ಕೆ ತೆರೆದುಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ.






