ಸಂಚರಿಸುತ್ತಿದ್ದ  ರೈಲಿನಡಿಗೆ ಹಾರಿ ಸಾವಿಗೆ ಶರಣಾದ ಯುವಕ

ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಯುವಕ ಸಾವಿಗೆ ಶರಣಾದ ಘಟನೆ ಕಾಸರಗೋಡು ಪಳ್ಳಂನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಬಗ್ಗೆ ಲೋಕೋ ಪೈಲಟ್ ನೀಡಿದ ಮಾಹಿತಿ ಪ್ರಕಾರ ನಗರಠಾಣೆ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.  ಘಟನೆ ನಡೆದ ಸ್ಥಳದಿಂದ ಲಭಿಸಿದ ಪರ್ಸ್‌ನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರಲ್ಲಿ ಟಿ. ಜಿತಿನ್ (26)  ತೆಚ್ಚಿಕಾಟಿಲ್  ಕುರುವಾಟ್ಟೂರ್ ವಲ್ಲಪ್ಪುಳ ಪಾಲಕ್ಕಾಡ್ ಎಂಬ ವಿಳಾಸವಿದೆ.   ಮೃತದೇಹ ಸಮೀಪ ಒಂದು ಮೊಬೈಲ್ ಫೋನ್ ಪತ್ತೆಯಾಗಿದ್ದು,ಅದರಲ್ಲಿ ಮೃತಪಟ್ಟ ಯುವಕನದ್ದೆಂದು ಅಂದಾಜಿಸುವ ಹಲವು ಫೋಟೋಗಳು ಲಭಿಸಿವೆ. ಇವುಗಳನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.    ಕಾಸರಗೋಡು ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ. ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪಳ್ಳಂಗೆ ತಲುಪುತ್ತಿದ್ದಂತೆ ಯುವಕ ಅದರಡಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.  ಪೊಲೀಸರು ಆತನ ಮನೆಯವರನ್ನು ಸಂಪರ್ಕಿಸುವ ಯತ್ನದಲ್ಲಿ ತೊಡಗಿದ್ದಾರೆ. ಮನೆಯವರು ಇಲ್ಲಿಗೆ ಆಗಮಿಸಿದ ಬಳಿಕವೇ ಮೃತ ವ್ಯಕ್ತಿ ಜಿತಿನ್ ಆಗಿದ್ದಾನೆಯೇ ಎಂಬುವುದನ್ನು ಖಾತರಿಪಡಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಈ ಯುವಕ ಪಾಲಕ್ಕಾಡ್‌ನಿಂದ ಕಾಸರಗೋಡಿಗೆ ಬಂದ ಉದ್ದೇಶವೇನು? ಆತ ರೈಲಿನಡಿಗೆ ಹಾರಲು ಕಾರಣವೇನೆಂಬ ಬಗ್ಗೆ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page