10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರಕರಣ ದಾಖಲಿಸಿದ ರಾಜ್ಯ ಮಕ್ಕಳ ಹಕ್ಕು ಆಯೋಗ

ಕಾಸರಗೋಡು: ಚೆರುವತ್ತೂರು ಟೆಕ್ನಿಕಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ನೀಲೇಶ್ವರ ತೈಕಡಪ್ಪುರ ಅಳಿತ್ತಲದ ನೀರಜ್ ಸಂತೋಷ್ (15) ಆತ್ಮಹತ್ಯೆಗೈದ ಘಟನೆಯ ಬಗ್ಗೆ ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಬಾಲಕನ ಆತ್ಮಹತ್ಯೆಗೆ ಸಂಬಂಧಿಸಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ಧಿಗಳ ಆಧಾರದಲ್ಲಿ ಆಯೋಗ ಈ ಪ್ರಕರಣ ದಾಖಲಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಹಾಗೂ ಜಿಲ್ಲಾ ಶಿಶು ಸಂರಕ್ಷಣಾ ಅಧಿಕಾರಿಗೆ ಆಯೋಗ ನಿರ್ದೇಶ ನೀಡಿದೆ.

ನೀರಜ್ ಸಂತೋಷ್‌ನ ಆತ್ಮಹತ್ಯೆಗೆ ಸಂಬಂಧಿಸಿ ಆತನ ಹೆತ್ತವರು ಶಾಲಾ ಅಧಿಕಾರಿಗಳು ಮತ್ತು ಅಧ್ಯಾಪಕರ ವಿರುದ್ಧ ಗಂಭೀರ ಆರೋಪ ಹೊರಿಸಿ ರಂಗಕ್ಕಿಳಿದಿದ್ದಾರೆ. ಮಾತ್ರವಲ್ಲ ಶಾಲೆಯ ಕೆಲವರ ನಡವಳಿಕೆಯಿಂದ ಉಂಟಾದ ತೀವ್ರ ಮಾನಸಿಕ ಒತ್ತಡವೇ ಈ ವಿದ್ಯಾರ್ಥಿ ಆತ್ಮಹತ್ಯೆಗೈಯ್ಯಲು ಕಾರಣವೆಂದು ಆತನ ಮನೆಯವರು ಹಾಗೂ ಸಂಬಂಧಿಕರು ಆರೋಪಿಸಿ ದ್ದಾರೆ. ನೀರಜ್‌ನ ಸಾವಿಗೆ ನಿಜವಾದ ಕಾರಣವನ್ನು ಪತ್ತೆಹಚ್ಚಿ ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆತನ ತಂದೆ ಪಿ.ಪಿ. ಸಂತೋಷ್ ಮತ್ತು ತಾಯಿ ಕೆ. ನಿಷಾ ಹೊಸದುರ್ಗ ಡಿವೈಎಸ್‌ಪಿ ಎಂ.ವಿ. ಅನಿಲ್ ಕುಮಾರ್‌ಗೆ ದೂರು ಕೂಡಾ ಸಲ್ಲಿಸಿದ್ದಾರೆ. ನೀರಜ್ ಸಂತೋಷ್ ನವೆಂಬರ್ ೧ರಂದು ಆತನ ಮನೆ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.

You cannot copy contents of this page