ಕಾಸರಗೋಡು: ರಾಷ್ಟ್ರಗೀತೆಯಾದ ವಂದೇ ಮಾತರಂಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿ ಗಳ ವಿರುದ್ಧ ವಿವಿಧ ಅಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ವಂದೇ ಮಾತರಂಗೂ ರಾಷ್ಟ್ರಗೀತೆಗೆ ಸಮಾನವಾದ ಗೌರವ ನೀಡಬೇಕು ಎಂದು ಇತ್ತೀಚೆಗೆ ತಿದ್ದುಪಡಿ ನಡೆಸಿದ ಕಾಯ್ದೆಯು ಸ್ಪಷ್ಟಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಡೆಸಿರುವುದು ಗಂಭೀರ ಕರ್ತವ್ಯಲೋಪವಾಗಿದೆ ಎಂದು ಅಶ್ವಿನಿ ಆರೋಪಿಸಿದ್ದಾರೆ.
ಆರೋಗ್ಯ ಸಚಿವ ಕೆ. ಮುರಳೀಧರನ್ ದೇವಸ್ವಂ ಇಲಾಖೆಯ ಉಸ್ತುವಾರಿಯನ್ನು ವಹಿಸಿದ ಸಚಿವರಾಗಿದ್ದಾರೆ. ವಂದೇ ಮಾತರಂನಲ್ಲಿ ದೇವಿ ಸ್ತುತಿ ಅವರನ್ನು ಅಸಮಾಧಾನಗೊಳಿಸುವುದಾದರೆ ದೇವಸ್ವಂ ಇಲಾಖೆಯನ್ನು ಅವರು ಹೇಗೆ ಮುನ್ನಡೆಸುವರು ಎಂದು ಅವರು ಪ್ರಶ್ನಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಸೇರಿದಂತೆ ಮುಸ್ಲಿಂ ಲೀಗ್ ನಾಯಕರು ಇತರ ಧರ್ಮೀಯರ ಆರಾಧನಾ ಮಂದಿರಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಾಗಿದ್ದಾರೆ. ಆದರೆ ವಂದೇ ಮಾತರಂ ವಿಷಯದಲ್ಲಿ ಈ ರೀತಿಯ ನಿಲುವು ಯಾಕೆ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ. ಆರೋಗ್ಯ ಸಚಿವ, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಕಲ್ಲಟ್ರ ಮಾಹಿನ್, ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭೆಯ ಸ್ಪೀಕರ್, ಲೋಕಸಭೆಯ ಸ್ಪೀಕರ್, ರಾಜ್ಯಪಾಲ ಮತ್ತು ಕೇಂದ್ರ ಗೃಹ ಸಚಿವರಿಗೆ ದೂರು ನೀಡಲಾಗುವುದು ಎಂದು ಅಶ್ವಿನಿ ಸ್ಪಷ್ಟಪಡಿಸಿದ್ದಾರೆ.






