ಬದಿಯಡ್ಕ: ಬದಿಯಡ್ಕ ಮೇಲಿನ ಪೇಟೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ದಂಪತಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ. ಬದಿಯಡ್ಕ ಮರ್ಚೆಂಟ್ಸ್ ಅಸೋಸಿಯೇಶನ್ ನ ಪಿಗ್ಮಿ ಸಂಗ್ರಾಹಕ ರಾಜೇಶ್, ಪತ್ನಿ ವೀಣಾ, ಮಗಳು ರತನ್ಯ ಎಂಬಿವರು ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಸಂಚರಿಸಿದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಈ ಅಪಘಾತ ಸಂಭವಿಸಿದೆ. ರಾಜೇಶ್, ಪತ್ನಿ, ಮಗಳು ಬದಿಯಡ್ಕ ಬಳಿಯ ಬರ್ಲ ತರವಾಡು ಮನೆಯಿಂದ ಪೆರಡಾಲ ನವಜೀವನ ಶಾಲೆ ಬಳಿಯ ಸ್ವಂತ ಮನೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಚೆರ್ಕಳ ಭಾಗದಿಂದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಹಾಗೂ ಕಾರು ಮಗುಚಿ ಬಿದ್ದಿದೆ. ಕಾರಿನಲ್ಲಿ ಕರ್ನಾಟಕದ ಪುತ್ತೂರು ನಿವಾಸಿಗಳು ಸಂಚರಿಸುತ್ತಿದ್ದರೆಂದೂ ಅವರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ.







