ಕಾಸರಗೋಡು: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಪೆರಿಯಾ ಜಿಎಚ್ಎಸ್ಎಸ್ನಲ್ಲಿ ನಾಳೆ ಚಾಲನೆ ದೊರಕಲಿದೆ. ನ. 28ರ ತನಕ ನಡೆಯಲಿರುವ ಕಲೋತ್ಸವದ ಪ್ರಯುಕ್ತ ಪೆರಿಯದಲ್ಲಿ ಇಂದು ಅಪರಾಹ್ನ 3 ಗಂಟೆಗೆ ಡಂಗುರಜಾಥಾ ನಡೆಯಲಿದೆ. ಮಲೆಯಾಳಂ ಸಿನಿಮಾ ನಟ ವಿಜಯ ರಾಘವನ್ ಉದ್ಘಾಟಿಸುವರು. ಇದರ ಜತೆಗೆ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇನ್ಕ್ಲೂಸಿವ್ ಕಲೋತ್ಸವ ನಡೆಯಲಿದೆ. ಈ ವಿಭಾಗದ ೨೦೦ರಷ್ಟು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ವಿಶೇಷ ವೇದಿಕೆ ಸಿದ್ಧಪಡಿಸಲಾಗುವುದು. ಮಾನಸಿಕ ಹಾಗೂ ದೈಹಿಕ ವಿಕಲ ಚೇತನ ವಿದ್ಯಾರ್ಥಿಗಳು ಕಲಿಯುತ್ತಿರುವ 322 ಶಾಲೆಗಳು ಜಿಲ್ಲೆಯಲ್ಲಿದ್ದು 700ರಷ್ಟು ವಿದ್ಯಾರ್ಥಿಗಳು ಅಲ್ಲಿದ್ದಾರೆ. ಇನ್ ಕ್ಲೂಸಿವ್ ಕಲೋತ್ಸವವನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಉದ್ಘಾಟಿಸುವರು.
ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ 3000 ಮಂದಿಗೆ ಆಹಾರ ವಿತರಣೆ ನಡೆಯಲಿದೆ. ಇದರಂತೆ ಮೊದಲ ಎರಡು ದಿನ 3000ದಂತೆ, ನಂತರದ ಎರಡು ದಿನ 6000, ಕೊನೆಯ ದಿನ 12 ಸಾವಿರ ಮಂದಿಗೆ ಆಹಾರ ಸಿದ್ಧಪಡಿಸಲಾಗುವುದು. ಕುಟುಂಬಶ್ರೀ ಮತ್ತು ಇತರ ಸಂಘಟನೆಗಳು ಇದಕ್ಕೆ ಸಹಾಯವೊದಗಿಸಲಿವೆ. ಕಾಸರಗೋಡು ಕಂದಾಯ ಜಿಲ್ಲೆಯ 7 ಉಪ ಜಿಲ್ಲೆಗಳಿಂದಾಗಿ ಒಟ್ಟು 5100 ಕಲಾ ಪ್ರತಿಭೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. 13 ವೇದಿಕೆಗಳಲ್ಲಾಗಿ ಸ್ಪರ್ಧೆಗಳು ನಡೆಯಲಿವೆ. ಯುಪಿ, ಎಚ್ಎಸ್, ಎಚ್ಎಚ್ಎಸ್ ವಿಭಾಗಗಳಲ್ಲಾಗಿ 300ರಷ್ಟು ಸ್ಪರ್ಧೆಗಳು ನಡೆಯಲಿದೆ. ವೇದಿಕೇತರ ಸ್ಪರ್ಧೆಗಳು ನಾಳೆ, ವೇದಿಕೆ ಸ್ಪರ್ಧೆಗಳು 25ರಿಂದ ಆರಂಭಗೊಳ್ಳಲಿದೆ. ಕಲೋತ್ಸವವನ್ನು 26ರಂದು ಸಂಜೆ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಕೆ.ನೀಲಕಂಠನ್ ಅಧ್ಯಕ್ಷತೆ ವಹಿಸುವರು. ಪರಿಕಯಂ ಎಂಬ ಕಲೋತ್ಸವ ಸ್ಮರಣಿಕೆಯನ್ನು
ಈ ವೇಳೆ ಬಿಡುಗಡೆಗೊಳಿ ಸಲಾಗುವುದು. 28ರಂದು ನಡೆಯುವ ಸಮಾರೋಪ ಸಮಾರಂಭವನ್ನು ಶಾಸಕ ಕೆ.ನೀಲಕಂ ಠನ್ ಉದ್ಘಾಟಿಸುವರು. ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಬಹು ಮಾನ ವಿತರಿಸುವರು. ಜಿಲ್ಲಾ ಪಂ. ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸುವರು.






