ನಕಲಿ ಮಾಧ್ಯಮ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಒತ್ತಾಯ: ದೂರು ಗೃಹಸಚಿವರಿಗೆ ಹಸ್ತಾಂತರ

ಕುಂಬಳೆ: ಮಾಧ್ಯಮ ಕಾರ್ಯಕರ್ತರ ಸೋಗಿನಲ್ಲಿ ಸರಕಾರಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನಧಿಕೃತವಾಗಿ ತಲುಪಿ ಫೋಟೋ, ವೀಡಿಯೋ ಚಿತ್ರೀಕರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಪ್ರೆಸ್ ಫಾರಂ ನೀಡಿದ ದೂರಿನಲ್ಲಿ ಮುಖ್ಯಮಂತ್ರಿ ಕ್ರಮ ಆರಂಭಿಸಿದ್ದಾರೆ. ದೂರನ್ನು ಗೃಹಖಾತೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ನಿರ್ದೇಶಿಸಲಾಗಿದೆ.

ಮಂಜೇಶ್ವರ, ಉಪ್ಪಳ, ಕುಂಬಳೆ ಪ್ರದೇಶಗಳಲ್ಲಿ ಅಂಗೀಕಾರವಿಲ್ಲದೆ ಮಾಧ್ಯಮ ಕಾರ್ಯಕರ್ತರೆಂಬ ಹೆಸರಲ್ಲಿ  ಕಾರ್ಯಾಚರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸಚಿವರು, ಶಾಸಕರು,ಇತರ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸುವ ಕಾರ್ಯಕ್ರಮಗಳಿಗೆ ನಕಲಿ ಗುರುತುಚೀಟಿ ಗಳನ್ನು ಉಪಯೋಗಿಸಿ ತಲುಪಿ  ವೇದಿಕೆ ಸಹಿತ  ವಿವಿಧೆಡೆ  ಕಾರ್ಯಾಚರಿಸು ವುದು ಯಥಾರ್ಥ ಮಾಧ್ಯಮ ಕಾರ್ಯ ಕರ್ತರ  ಕೆಲಸ ನಿರ್ವಹಣೆಗೆ ತೊಂದರೆ ಸೃಷ್ಟಿಸುತ್ತಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.  ವಾಹನಗಳಲ್ಲಿ ಅನಧಿಕೃತವಾಗಿ ಪ್ರೆಸ್ ಸ್ಟಿಕ್ಕರ್ ಅಂಟಿಸಿ ಸಂಚರಿಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.  ಪತ್ರಿಕೆ ಸಹಿತ ಮಾಧ್ಯಮ ಚಟುವಟಿಕೆಗೆ ಯಾವುದೇ ಸಂಬಂಧ, ಪರಿಚಯವಿಲ್ಲದವರು ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಹೆಸರಲ್ಲಿ ಮಾಧ್ಯಮ ಕಾರ್ಯಕರ್ತರೆಂದು ತಿಳಿಸಿ, ವೆಬ್‌ಸೈಟ್, ನೋಂದಾಯಿತ ಡೊಮೈನೋ ಇಲ್ಲದೆ ಆನ್‌ಲೈನ್ ಮಾಧ್ಯಮವೆಂದು ತಿಳಿಸಿ  ಕಾರ್ಯಾಚರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಜೇಶ್ವರ ವ್ಯಾಪ್ತಿಯಲ್ಲಿ ಪ್ರೆಸ್ ಸ್ಟಿಕ್ಕರ್ ಅಂಟಿಸಿ ಮಾದಕವಸ್ತುಗಳು,  ಹೊಯ್ಗೆ ಸಹಿತ  ಕಾನೂನು ವಿರುದ್ಧವಾಗಿ ಸಾಗಾಟ ನಡೆಸುವವರಿಗೆ ಬೆಂಗಾವಲು  ನೀಡುವುದಾಗಿ ಈ ಹಿಂದೆಯೂ ದೂರುಗಳು ಕೇಳಿಬಂದಿತ್ತು.   ಈ ವಿಷಯವನ್ನು  ಮುಖ್ಯಮಂತ್ರಿಗೆ ನೇರವಾಗಿ ಭೇಟಿಯಾಗಿ ತಿಳಿಸಲಾಗಿತ್ತು. ಆಪರೇಶನ್ ತೂಫಾನ್ ಮಾದರಿಯಲ್ಲಿ ನಕಲಿ ಮಾಧ್ಯಮ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರೆಸ್ ಫಾರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ, ಕಾರ್ಯದರ್ಶಿ ಐ.ಮುಹಮ್ಮದ್ ರಫೀಕ್ ಒತ್ತಾಯಿಸಿದ್ದರು.

RELATED NEWS

You cannot copy contents of this page