ಕುಂಬಳೆಯಲ್ಲಿ ಬಸ್ ನಿಲುಗಡೆ ವಿಷಯದಲ್ಲಿ ಮತ್ತೆ ಸಮಸ್ಯೆ: ಮರ್ಚೆಂಟ್ಸ್ ಯೂತ್ ವಿಂಗ್-ಬಸ್ ನೌಕರರ ಮಧ್ಯೆ ಘರ್ಷಣೆ; ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳದಿದ್ದಲ್ಲಿ ಬಸ್ ನೌಕರರಿಂದ ಮುಷ್ಕರದ ಮುನ್ನೆಚ್ಚರಿಕೆ 

ಕುಂಬಳೆ:  ಕುಂಬಳೆ ಪೇಟೆಯ ಬಸ್ ನಿಲ್ದಾಣ ಸಮಸ್ಯೆ ತೀವ್ರಗೊಂಡು ಘರ್ಷಣೆಯತ್ತ ಸಾಗುತ್ತಿದೆ. ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ಕೈಗೊಳ್ಳುತ್ತಿರುವ  ನಿರ್ಲಕ್ಷ್ಯ ಕ್ರಮವೇ ಘರ್ಷಣೆಯನ್ನು ನಿಯಂತ್ರಿಸಲು  ಸಾಧ್ಯವಾಗದ ಸ್ಥಿತಿಗೆ ಕಾರಣವೆಂದು ಪ್ರಯಾಣಿಕರು ಸಹಿತ ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. ಘರ್ಷಣೆ ನಿರತರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಾಳೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದೆಂದು ಬಸ್ ನೌಕರರು ಮುನ್ನೆಚ್ಚರಿಕೆ ನೀಡಿದ್ದಾರೆ.

ಕುಂಬಳೆ ಪೇಟೆಯಲ್ಲಿ ಸುಮಾರು ೪೦ ಲಕ್ಷ ರೂಪಾಯಿಗಳನ್ನು ಪಂಚಾಯತ್ ಫಂಡ್‌ನಿಂದ ತೆಗೆದು ನಿರ್ಮಿಸಿದ ಬಸ್ ವೈಟಿಂಗ್ ಶೆಡ್‌ನ ಮುಂದೆ ಪ್ರಯಾಣಿಕರನ್ನು ಇಳಿಸಕೂಡದೆಂದೂ ಎಲ್ಲಾ ಪ್ರಯಾಣಿಕರನ್ನು ಪೇಟೆಯ ರಸ್ತೆ ಬದಿ ಹಳೆ ಬಸ್ ನಿಲ್ದಾಣದಲ್ಲಿ ಇಳಿಸಿದ ಬಳಿಕ ಹೊಸತಾಗಿ ನಿರ್ಮಿಸಿದ ವೈಟಿಂಗ್ ಶೆಡ್‌ನ ಮುಂದೆ  ಬಸ್‌ಗಳನ್ನು ನಿಲ್ಲಿಸಬೇಕೆಂಬ ಒಂದು ವಿಭಾಗ ವ್ಯಾಪಾರಿಗಳ  ಅಭಿಪ್ರಾಯವೇ ನಿನ್ನೆ ಘರ್ಷಣೆಗೆ ಕಾರಣವೆಂದು ಹೇಳಲಾಗುತ್ತಿದೆ. ಈ ಮಧ್ಯೆ ಯೂತ್‌ವಿಂಗ್ ಕಾರ್ಯಕ ರ್ತರು ಬಸ್ ಕಂಡಕ್ಟರ್‌ಗಳನ್ನು ತಡೆದು ನಿಲ್ಲಿಸಿ ಬ್ಯಾಗ್ ಕಸಿದು ತೆಗೆಯಲು ಪ್ರಯತ್ನಿಸಿರುವುದಾಗಿಯೂ ದೂರಲಾಗಿದೆ. ಇದರಿಂದ ಇನ್ನಷ್ಟು ಬಸ್ ನೌಕರರು ಹಾಗೂ ಆಟೋ ಟ್ಯಾಕ್ಸಿ ನೌಕರರು ಬಸ್ ನೌಕರರಿಗೆ ಬೆಂಬಲವಾಗಿ ಅಲ್ಲಿಗೆ ತಲುಪಿದ್ದಾರೆ.  ಇದನ್ನರಿತು ಪೊಲೀಸರು ತಲುಪಿ ಘರ್ಷಣೆ ಸ್ಥಿತಿಯನ್ನು ಇಲ್ಲದಾಗಿಸಿ ದ್ದಾರೆ. ಕುಂಬಳೆ ಮರ್ಚೆಂಟ್ಸ್ ಯೂತ್ ವಿಂಗ್ ಕಾರ್ಯಕರ್ತರು ಸಂಜೆ ಸೀತಾಂಗೋಳಿಯಲ್ಲಿ  ಒಗ್ಗೂಡಿ ಮುಳ್ಳೇರಿಯದಿಂದ ಕುಂಬಳೆಗೆ ಬರುತ್ತಿದ್ದ ಗುರುವಾಯೂರಪ್ಪನ್ ಬಸ್‌ಗೆ ಹತ್ತಿ ಕುಂಬಳೆಗೆ ತಲುಪಿದಾಗ  ಹಳೆಯ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು   ಒತ್ತಾಯಿಸಿದ್ದಾರೆ.  ಇದರಿಂದ ಹುಟ್ಟಿಕೊಂಡ ವಾಗ್ವಾದ  ಸಂಘರ್ಷ ಸ್ಥಿತಿಗೆ ತಲುಪುವುದರೊಂದಿಗೆ ಟ್ಯಾಕ್ಸಿ, ಆಟೋ ಚಾಲಕರು ಹಾಗೂ ಬಸ್ ನೌಕರರು ಘಟನೆ ಸ್ಥಳಕ್ಕೆ ತಲುಪಿದ್ದರು.  ಅವರ ಜೊತೆಗೆ ನಾಗರಿಕರು, ಪ್ರಯಾಣಿಕರು ಸೇರುವುದರೊಂದಿಗೆ ಸ್ಥಿತಿ ಬಿಗುಡಾಯಿಸಿದ್ದು, ಇದರಿಂದ ಪೊಲೀಸರು ಅಲ್ಲಿಗೆ ತಲುಪಿ ಇನ್ನು   ಮುಂದೆ ಇಂತಹ ಸಮಸ್ಯೆಗಳು ಉಂಟಾದರೆ ಎಲ್ಲರನ್ನೂ  ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಾಕೀತು ನೀಡಿದ್ದಾರೆ. ಅನಂತರ ಯೂತ್‌ವಿಂಗ್ ಕಾರ್ಯಕರ್ತರು  ಅಲ್ಲಿಂದ  ಮರಳಿದರು. ಈ ಹಿಂದೆ ಹಲವು ಬಾರಿ ಇಂತಹ ತಾಕೀತು ಪೊಲೀಸರು ನೀಡಿದ್ದರೂ ಈ ಹಿಂದಿನ ಸ್ಥಿತಿ ಮರುಕಳಿಸುತ್ತಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ. ಕಾನೂನು ಜ್ಯಾರಿಗೊಳಿಸಲು ಪೊಲೀಸರು ಸಿದ್ಧರಾಗದಿದ್ದಲ್ಲಿ ನಾಗರಿಕರೇ ಅದಕ್ಕೆ ಮುಂದೆ ಬರಬೇಕಾಗಲಿದೆಯೆಂದೂ  ಕೆಲವರು ತಿಳಿಸಿದ್ದಾರೆ.  ಕುಂಬಳೆಯಲ್ಲಿ ಅಲ್ಪಕಾಲದಿಂದ ಈ ಸಮಸ್ಯೆ ಪದೇ ಪದೇ ಉಂಟಾಗುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಪಂಚಾಯತ್ ಅಧಿಕಾರಿಗಳು ಈ ವಿಷಯದಲ್ಲಿ ತಮಗೆ ತೋಚಿದಂತೆ ವರ್ತಿಸುತ್ತಿದ್ದಾರೆಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಇದೇ ನಿಲುವು  ಮುಂದುವರಿದಲ್ಲಿ ಸ್ಥಿತಿ ಇದಕ್ಕಿಂತಲೂ ಬಿಗಡಾಯಿಸಲಿದೆಯೆಂದೂ ಅದರಿಂದ  ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾಗಲಿದೆಯೆಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

RELATED NEWS

You cannot copy contents of this page